ಚಿಕ್ಕೋಡಿ :ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕೊರೊನಾ ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ರಾಜ್ಯ ಪ್ರವೇಶಕ್ಕೆ ಸರ್ಕಾರ ಅನುಮತಿ ನೀಡಿದೆ. ಆದ್ರೆ, ಗಡಿ ಭಾಗದಲ್ಲಿ ನಿರ್ಮಿಸಲಾಗಿರುವ ಚೆಕ್ ಪೋಸ್ಟ್ಗಳು ಕೇವಲ ಹೆಸರಿಗೆ ಮಾತ್ರ ಇದ್ದು, ಜನರು ನಿರ್ಭೀತಿಯಿಂದ ರಾಜ್ಯ ಪ್ರವೇಶಿಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವ, ಇಚಲಕರಂಜಿ ಚೆಕ್ ಪೋಸ್ಟ್ ಬಳಿ ನಿರ್ಮಿಸಲಾಗಿರುವ ಕೋವಿಡ್ ತಪಾಸಣಾ ಕೇಂದ್ರಗಳು ಕೇವಲ ನಾಮಕಾವಸ್ತೆಗೆ ನಿಯೋಜಿಸಿದಂತಾಗಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಜಿಲ್ಲಾಡಳಿತ ದಿವ್ಯ ನಿರ್ಲಕ್ಷ್ಯತನ ತೋರುತ್ತಿದೆ. ಇದರಿಂದ ಗಡಿ ಭಾಗದ ಗ್ರಾಮಗಳ ನಿವಾಸಿಗಳಿಗೆ ಆತಂಕ ಉಂಟಾಗಿದೆ.
ಅಲ್ಲದೆ ಬೆಳಗಾವಿ ನಗರದಿಂದ ಸುಮಾರು 12 ಕಿ.ಮೀ ವ್ಯಾಪ್ತಿ ದೂರದಲ್ಲಿರುವ ಬಾಚಿ ಗ್ರಾಮದ ಪಕ್ಕದಲ್ಲಿರುವ ಜಿಲ್ಲಾಡಳಿತದ ಚೆಕ್ ಪೋಸ್ಟ್ನಲ್ಲಿ ಓರ್ವ ಪೊಲೀಸ್ ಪೇದೆ ಹಾಗೂ ಓರ್ವ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆಗೆ ಆಶಾ ಕಾರ್ಯಕರ್ತೆಯನ್ನು ಮಾತ್ರ ನಿಯೋಜಿಸಿದೆ.
ಆದ್ರೆ, ಸರಿಯಾಗಿ ತಪಾಸಣೆ ಮಾಡಬೇಕಿದ್ದ ಸಿಬ್ಬಂದಿ ಮಹಾರಾಷ್ಟ್ರದಿಂದ ಆಗಮಿಸುವ ಜನರನ್ನು ಹಾಗೆಯೇ ಒಳಗೆ ಬಿಟ್ಟು ಕೊಳ್ಳುತ್ತಿದ್ದಾರೆ. ಇನ್ನು, ಇಚಲಕರಂಜಿಯಿಂದ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಯಾವುದೇ ತಪಾಸಣೆ ಇಲ್ಲದೆ ರಾಜ್ಯ ಪ್ರವೇಶಿಸುತ್ತಿದ್ದಾರೆ.
ಸದ್ಯ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನಕ್ಕೆ 10ರಿಂದ 15 ಸಾವಿರಕ್ಕೆ ಹೆಚ್ಚಳವಾಗುತ್ತಿವೆ. ಆದ್ರೆ, ಅಧಿಕಾರಿಗಳು ಮಾತ್ರ ಬೇಜಾವಾಬ್ದಾರಿತನ ತೋರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ರೀತಿ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದರೆ, ರಾಜ್ಯಕ್ಕೆ ಮತ್ತೆ ಕೊರೊನಾ ಕಾಡುವುದಂತು ಕಟ್ಟಿಟ್ಟ ಬುತ್ತಿ. ಆದ್ದರಿಂದ ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂಬುದು ಸ್ಥಳೀಯರು ಆಗ್ರಹ.