ಬೆಳಗಾವಿ :ನನ್ನ ಏಳಿಗೆ ಸಹಿಸಲಾಗದವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಈ ವಿಷಯವನ್ನು ಜಿದ್ದಿನಿಂದಲೇ ಸವಾಲಾಗಿ ಸ್ವೀಕರಿಸಿದ್ದೇನೆ. ಈ ಆರೋಪದ ಬಗ್ಗೆ ಯಾವುದೇ ತನಿಖೆಗೆ ಸಿದ್ಧ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ತಮ್ಮ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರ ಆರೋಪದ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯದಲ್ಲಿ ಓರ್ವ ಹೆಣ್ಣು ಮಗಳಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾಗ, ಏಳಿಗೆ ಸಹಿಸದೆ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ನಾನು ರಾಜಕೀಯವಾಗಿ ಮುಂದಕ್ಕೆ ಹೋಗಬಾರದು ಎಂದು ಅನೇಕ ಶತ್ರುಗಳು, ಹಿತಶತ್ರುಗಳು ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ಈ ಆರೋಪದ ಬಗ್ಗೆ ತನಿಖೆಯಾದರೆ ಎದುರಿಸಲು ನಾನು ಸಿದ್ದಳಿದ್ದೇನೆ ಎಂದರು.
ನಾನು ಯಾವುದೇ ತಪ್ಪು ಮಾಡಿಲ್ಲ. ಆ ರೀತಿಯ ತಪ್ಪು ಮಾಡುವ ಅವಶ್ಯಕತೆಯೂ ನನಗಿಲ್ಲ. ಹೀಗಾಗಿ, ಇದರ ಬಗ್ಗೆ ತನಿಖೆಯಾಗಲಿ. ಏನು ವರದಿ ಬರುತ್ತೆ ಬರಲಿ. ನಾನು ಎಲ್ಲದಕ್ಕೂ ಸಿದ್ಧಳಿದ್ದೇನೆ. ನಾನು ಯಾವುದೇ ಮಾತುಕತೆ ಮಾಡಿಲ್ಲ. ನನ್ನ ಮೇಲೆ ಅಪವಾದ ಹೊರಸಲು ಅನೇಕ ಶತ್ರುಗಳು ಷಡ್ಯಂತ್ರ ಹೆಣಿದಿದ್ದಾರೆ. ನಾನೂ ಜಿದ್ದಿನಿಂದಲೇ ಸವಾಲಾಗಿ ಸ್ವೀಕರಿಸಿದ್ದೇನೆ. ಅಧಿಕಾರ ಇಲ್ಲದಾಗ ಕೂಡ ನಾನು ಸಮಾಜ ಸೇವೆ ಮಾಡುತ್ತಾ ಬಂದಿದ್ದೇನೆ. ಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಅದು ಎಲ್ಲರಿಗೂ ಗೊತ್ತಿರುವ ವಿಷಯ. ನನ್ನ ವಿರುದ್ಧದ ಆರೋಪ ಸತ್ಯಕ್ಕೆ ದೂರ ಎಂದರು.
ಯಾವುದೇ ಇಲಾಖೆಯ ಜವಾಬ್ದಾರಿ ನಿಭಾಯಿಸುವೆ :ರಾಷ್ಟ್ರೀಯ, ರಾಜ್ಯ ಬಿಜೆಪಿ ನಾಯಕರು, ಮಾಜಿ ಸಿಎಂ ಬಿಎಸ್‌ವೈ, ಸಿಎಂ ಬಸವರಾಜ್ ಬೊಮ್ಮಾಯಿ ನನ್ನ ಮೇಲೆ ವಿಶ್ವಾಸವಿಟ್ಟು ಎರಡನೇ ಬಾರಿ ಸಚಿವ ಸ್ಥಾನ ಕೊಟ್ಟಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಯಾವ ಇಲಾಖೆಯ ಜವಾಬ್ದಾರಿ ಕೊಡುತ್ತಾರೋ ಅದನ್ನು ನಿಭಾಯಿಸಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.
ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಪ್ರಯತ್ನಿಸುವೆ. ಕೋವಿಡ್, ಪ್ರವಾಹದಿಂದ ಜನ ತತ್ತರಿಸಿದ್ದಾರೆ. ಇಂದು ನನ್ನ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೇನೆ. ನಾಳೆ ಬೆಳಗ್ಗೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಿಡಗುಂದಿ ತಾಲೂಕಿಗೆ ಭೇಟಿ ನೀಡುವೆ. ವಿಜಯಪುರದ ಗಡಿ ಭಾಗಗಳಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಯಾವುದೇ ಜಿಲ್ಲೆ ಉಸ್ತುವಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದರು.
ಪ್ರಾಮಾಣಿಕ ಸೇವೆಯೇ ನನ್ನನ್ನು ಈ ಮಟ್ಟಕ್ಕೆ ತಂದಿದೆ :ಪ್ರವಾಹ ಪರಿಸ್ಥಿತಿ ಅವಲೋಕನ ಸೇರಿದಂತೆ ಸಂಭಾವ್ಯ ಕೋವಿಡ್ 3ನೇ ಅಲೆಯಲ್ಲಿ ಯಾರಿಗೂ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮಕೈಗೊಳ್ಳಲು ಸಚಿವ ಸಂಪುಟದಲ್ಲಿನ ಎಲ್ಲ ಸಚಿವರುಗಳು ಜಿಲ್ಲಾ ಪ್ರವಾಸಗಳನ್ನು ಕೈಗೊಂಡಿದ್ದೇವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.