ಬೆಳಗಾವಿ: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ಧರ್ಮದರ್ಶಿಗಳು ಹಾಗೂ ಪದಾಧಿಕಾರಿಗಳು ಇತ್ತೀಚೆಗೆ ಅಕಾಲಿಕವಾಗಿ ನಿಧನ ಹೊಂದಿರುವ ಕೇಂದ್ರ ಸಚಿವ ಸುರೇಶ್ ಅಂಗಡಿಯವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಅಂಗಡಿ ಕುಟುಂಬಸ್ಥರಿಗೆ ಟಿಕೆಟ್ ನೀಡಬೇಕು, ಹುಬ್ಬಳ್ಳಿ ಸಿದ್ಧಾರೂಢ ಕಮಿಟಿ ಒತ್ತಾಯ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿರುವ ಅಂಗಡಿಯವರ ಮನೆಗೆ ಇಂದು ಭೇಟಿ ನೀಡಿ ಅವರ ಭಾವಚಿತ್ರಕ್ಕೆ ಗೌರವ ಸಮರ್ಪಿಸಿದರು.
ಬಳಿಕ ಮಠದ ಧರ್ಮದರ್ಶಿ ಶಾಮಾನಂದ ಪೂಜೇರಿ ಮಾತನಾಡಿ, ಸುರೇಶ ಅಂಗಡಿಯವರು ಕೇವಲ ಓರ್ವ ರಾಜಕಾರಣಿ ಆಗಿರಲಿಲ್ಲ. ಅತ್ಯಂತ ಸರಳ, ಸಜ್ಜನಿಕೆಯ ಸಾತ್ವಿಕ ಮೂರ್ತಿಯಾಗಿದ್ದರು. ನ್ಯಾಯ, ನೀತಿ ಧರ್ಮದ ಮೇಲೆ ನಿಂತು ರಾಜಕಾರಣ ಮಾಡುತ್ತಿದ್ದರು. ಜೊತೆಗೆ ಸಿದ್ಧಾರೂಢರ ಪರಮ ಭಕ್ತರೂ ಆಗಿದ್ದರು. ಅಂತಹವರ ಅಕಾಲಿಕ ಮರಣ ಕುಟುಂಬಕ್ಕೆ ಆಗಿರುವ ದುಃಖದಷ್ಟೇ ಸಿದ್ಧಾರೂಢರ ಭಕ್ತರಿಗೂ ಆಗಿದೆ ಎಂದರು.
ಎಸ್.ಎಂ.ಕೃಷ್ಣರ ಅಧಿಕಾರದ ಕಾಲದಿಂದಲೂ ಹುಬ್ಬಳ್ಳಿ ರೈಲ್ವೇ ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರಿಡಲು ಆಗಿರಲಿಲ್ಲ. ಆದರೆ, ಕೇಂದ್ರ ಸಚಿವರಾದ ಒಂದು ವರ್ಷದೊಳಗೆ ಈ ಮಹತ್ಕಾರ್ಯ ಮಾಡಿದ್ದರು ಎಂದು ಸ್ಮರಿಸಿಕೊಂಡರು.
ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ಕ್ಷೇತ್ರ ಮತ್ತು ರಾಜ್ಯದ ಜನರ ಆಸೆ ಕೂಡ ಅಂಗಡಿಯವರ ಕುಟುಂಬಸ್ಥರಿಗೆ ಟಿಕೆಟ್ ಕೊಡಬೇಕು ಎಂಬುದಾಗಿದೆ. ಅಂಗಡಿ ಸ್ಥಾನ ತುಂಬಲು ಅವರ ಕುಟುಂಬಕ್ಕೆ ಮಾತ್ರ ಸಾಧ್ಯ. ಹೀಗಾಗಿ ಅವರ ಪತ್ನಿ ಸೇರಿ ಕುಟುಂಬಸ್ಥರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.