ಬೆಳಗಾವಿ:ಮನೆಯಲ್ಲಿ ಹಿಜಾಬ್ ಹಾಕಿಕೊಂಡು ಹೋಗು ಅಂತಾರೆ, ಕಾಲೇಜಿನಲ್ಲಿ ಹಾಕಿಕೊಳ್ಳಬೇಡಿ ಅಂತಾರೆ. ನಾವು ಏನ್ ಮಾಡೋಣ..! ಇದು ಇಲ್ಲಿನ ವಿಜಯ್ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಸುಝನ್ರ ಅಳಲು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ವಿದ್ಯಾರ್ಥಿನಿ ಸುಝನ್, ಹಿಜಾಬ್ ಹಾಕಿಕೊಂಡು ತರಗತಿಗೆ ಬರಲು ಶಾಲಾ ಸಿಬ್ಬಂದಿ ಅವಕಾಶ ನೀಡುತ್ತಿಲ್ಲ. ಕೋರ್ಟ್ ಆದೇಶ ಪಾಲನೆ ಮಾಡಲು ಸೂಚಿಸಿದರು. ಆದರೆ, ಮನೆಯಲ್ಲಿ ಪೋಷಕರು ಹಿಜಾಬ್ ತೆಗೆಯದಿರಲು ಹೇಳಿದ್ದಾರೆ. ಕೋರ್ಟ್ ಆದೇಶ ಪಾಲನೆ ಜೊತೆಗೆ ಪಾಲಕರ ಸೂಚನೆಯೂ ನಮಗೆ ಮುಖ್ಯ. ಹೀಗಾಗಿ ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ ಎಂದು ಅಸಹಾಯಕತೆ ತೋರಿದರು.
ಮನೆಯವರು ಹಿಜಾಬ್ ಹಾಕು ಅಂತಾರೆ..ಕಾಲೇಜಲ್ಲಿ ಬೇಡ ಅಂತಾರೆ..ಏನು ಮಾಡೋದು? ನಮಗೆ ಶಿಕ್ಷಣ ಮುಖ್ಯ. ಹಿಜಾಬ್ ಸಹ ಬೇಕು. ಮುಂದೆ ರಂಜಾನ್ ಹಬ್ಬ ಬರ್ತಿದೆ. ಫೆಬ್ರವರಿ 26ರಂದು ನಮ್ಮ ಪರೀಕ್ಷೆ ಇದೆ. ಹಿಂದಿನಿಂದಲೂ ನಾವು ಹಿಜಾಬ್ ಧರಿಸಿ ಬರ್ತಿದ್ವಿ, ಈಗಲೂ ಅವಕಾಶ ನೀಡಬೇಕು. ನಮ್ಮ ತರಗತಿಯಲ್ಲಿ ಶೇಕಡಾ 70 ಕ್ಕಿಂತ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರಿದ್ದೇವೆ. ಬೇಕಾದರೆ ನಮಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಿಕೊಡಲಿ ಎಂದು ವಿದ್ಯಾರ್ಥಿನಿ ಮನವಿ ಮಾಡಿದ್ದಾರೆ.
ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಹೈಕೋರ್ಟ್ ಆದೇಶದ ಬಗ್ಗೆ ಶಿಕ್ಷಕರು ತಿಳಿ ಹೇಳಿದ್ರು. ತರಗತಿಯಲ್ಲಿ ಹಿಜಾಬ್ ತೆಗೆದಿಟ್ಟು ಬರುವಂತೆ ಹೇಳಿದರು. ನಾವು ಒಪ್ಪದಿದ್ದಕ್ಕೆ ತರಗತಿಯಲ್ಲಿ ಕೂರಲು ಅವಕಾಶ ನೀಡಲಿಲ್ಲ. ಹೈಕೋರ್ಟ್ ಆದೇಶ ಇದೆ. ನೀವೇ ಈ ಬಗ್ಗೆ ನಿರ್ಧರಿಸಿ ಎಂದು ಹೇಳಿದರು. ಹೀಗಾಗಿ ನಾವೇ ಶಾಲೆಯಿಂದ ವಾಪಸ್ ಮನೆಗೆ ಹೋಗುತ್ತಿದ್ದೇವೆ ಎಂದು ವಿದ್ಯಾರ್ಥಿನಿ ಹೇಳಿದರು.
2 ಗಂಟೆ ಮನವೊಲಿಕೆ ಯತ್ನ ವಿಫಲ:ಇದಕ್ಕೂ ಮೊದಲು ವಿಜಯ ಪ್ಯಾರಾ ಮೆಡಿಕಲ್ ಕಾಲೇಜಿನ 20 ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಹೈಕೋರ್ಟ್ ಆದೇಶದ ಬಗ್ಗೆ ಮಾಹಿತಿ ನೀಡಲಾಯಿತು. ಸತತ 2 ಗಂಟೆಗಳ ಕಾಲ ನಡೆದ ಸಂಧಾನ ಸಭೆ ವಿಫಲವಾಗಿ, ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ಒಪ್ಪದ ಕಾರಣ ಅವರನ್ನು ಕೋರ್ಟ್ ಆದೇಶ ಪಾಲಿಸುವಂತೆ ತಿಳಿ ಹೇಳಲಾಯಿತು. ಬಳಿಕ ವಿದ್ಯಾರ್ಥಿಗಳು ಹಿಜಾಬ್ ತೆಗೆಯಲು ಒಪ್ಪದೇ ಮನೆಗೆ ತೆರಳಿದ್ದಾರೆ.
ಪೋಷಕರ ಜತೆ ಚರ್ಚಿಸಲು ಹೇಳಿದ್ದೇವೆ:ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಪಾಟೀಲ್, ವಿದ್ಯಾರ್ಥಿಗಳಿಗೆ ಹೈಕೋರ್ಟ್ ಆದೇಶದ ಬಗ್ಗೆ ಮಾಹಿತಿ ನೀಡಲಾಗಿದೆ. ನಾವು ಹೈಕೋರ್ಟ್ ಆದೇಶವನ್ನು ಪಾಲನೆ ಮಾಡುತ್ತೇವೆ. ನಾಳೆಯಿಂದಲೂ ಎಲ್ಲ ತರಗತಿಗಳು ಎಂದಿನಂತೆ ನಡೆಯುತ್ತವೆ. ಮಕ್ಕಳು ತಮ್ಮ ಪೋಷಕರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ಸೂಚಿಸಿದ್ದೇವೆ ಎಂದು ತಿಳಿಸಿದರು.
ಓದಿ:ಹಿಜಾಬ್ ಪ್ರಕರಣ: ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಬಗ್ಗೆ ಹೈಕೋರ್ಟ್ ಹೇಳಿದ್ದೇನು?