ಬೆಳಗಾವಿ :ನಗರದಲ್ಲಿ ಕಳೆದ ಮೂರು ದಿನಗಳಿಂದ ಮಳೆರಾಯ ತನ್ನ ಆರ್ಭಟ ಮುಂದುವರಿಸಿದ್ದಾನೆ. ವರುಣನ ಅಬ್ಬರಕ್ಕೆ ಕುಂದಾನಗರಿ ಜನ ಬೆಚ್ಚಿಬಿದ್ದಿದ್ದಾರೆ. ನಗರದ ವಿವಿಧ ಕಡೆಗಳಲ್ಲಿ ಮನೆಗಳು ಜಲಾವೃತವಾಗಿದ್ದು, ನಗರ ಪ್ರಮುಖ ರಸ್ತೆಗಳು ನದಿಯ ಸ್ವರೂಪ ಪಡೆದುಕೊಂಡಿವೆ. ಇಲ್ಲಿನ ಓಂನಗರದ, ಹಿಂಡಲಗಾ, ಶಿವಾಜಿ ನಗರ, ವೀರಭದ್ರ, ಕೇಶವ್ ನಗರ ಬಳಿಯ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ನಿಂತಿದ್ದು, ಜನರು ಮನೆ ಬಿಟ್ಟು ಹೊರಗೆ ಬರಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ವಡಗಾವಿಯ ಕೇಶವ ನಗರದಲ್ಲಿ 20ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ನೆಲಮಹಡಿಯಲ್ಲಿ ವಾಸವಿದ್ದ ಕುಟುಂಬಗಳನ್ನು ಮೇಲ್ಮಹಡಿಗೆ ಶಿಫ್ಟ್ ಮಾಡಲಾಗಿದೆ. ಮನೆಯ ಕಾಂಪೌಂಡ್‍ಗೆ ನೀರು ನುಗ್ಗಿದ್ದರಿಂದ ಸ್ಥಳೀಯರು ಪರದಾಡುವಂತಾಗಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಮಾಡದ ಹಿನ್ನೆಲೆ ಮಳೆನೀರು ಮನೆಗೆ ನುಗ್ಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲವೆಂದು ಇಲ್ಲಿನ ಜನ ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕಿದ್ದಾರೆ.
ಬೆಳಗಾವಿಯಲ್ಲಿ ಚಿಕ್ಕಮಕ್ಕಳ ಆಸ್ಪತ್ರೆಗೆ ನುಗ್ಗಿದ ನೀರು:ಶ್ರೀನಗರದ ಗಾರ್ಡನ್ ಪಕ್ಕದಲ್ಲಿರುವ ಡಾ. ಮುರುಗೇಶ್ ಪಾಟೀಲ್ ಮಾಲೀಕತ್ವದ ಚಿಕ್ಕಮಕ್ಕಳ ಆಸ್ಪತ್ರೆಗೆ ಮಳೆ ನೀರು ನುಗ್ಗಿದೆ. ಆಸ್ಪತ್ರೆಯಲ್ಲಿ ನೆಲದ ಮೇಲೆ ಸುಮಾರು 6 ಇಂಚ್‍ಗಳಷ್ಟು ನೀರು ನಿಂತಿದ್ದು, ರೋಗಿಗಳು ಹಾಗೂ ವೈದ್ಯರು ಈ ನೀರಿನಲ್ಲಿಯೇ ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ. ಮೆಡಿಕಲ್ ಶಾಪ್‍ಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಔಷಧಿಗಳು ನಷ್ಟವಾಗಿವೆ.
ಶಿವಾಜಿ ನಗರದಲ್ಲೂ 30ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ ನೀರು:ಬೆಳಗಾವಿಯ ಶಿವಾಜಿ ನಗರದಲ್ಲಿ ಮಹಾಮಳೆಗೆ 30ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಅತಿಯಾದ ಮಳೆಗೆ ಕೋಟೆ ಕೆರೆಗೆ ಹೋಗುವ ನೀರು ಕಾಲೋನಿಗೆ ನುಗ್ಗಿ ಅವಾಂತರ ಸೃಷ್ಟಿಸಿದ್ದು ಮನೆಯಲ್ಲಿದ್ದ ಆಹಾರ ಸಾಮಗ್ರಿಗಳು, ದಿನಸಿ, ಬಟ್ಟೆ ನೀರುಪಾಲಾಗಿದ್ದು ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ಕಾಲೋನಿ ಜನರು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.