ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್- ಬಿಜೆಪಿ ಮಧ್ಯೆ ಸಾವರ್ಕರ್ ವಿವಾದ ಜೋರಾಗಿದೆ. ಈ ಮಧ್ಯೆ ಬೆಳಗಾವಿಯ ಐತಿಹಾಸಿಕ ಗಣೇಶೋತ್ಸವದಲ್ಲಿ ಸಾವರ್ಕರ್ ಹವಾ ಜೋರಾಗಿದೆ. ಈ ಬಾರಿ ಗಣೇಶೋತ್ಸವವನ್ನು ಸಾವರ್ಕರ್ ಉತ್ಸವವಾಗಿ ಆಚರಿಸುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನಿನ್ನೆಯಷ್ಟೇ ಹೇಳಿದ್ದರು. ಅದೇ ರೀತಿ ಈ ಬಾರಿ ಬೆಳಗಾವಿ ಗಣೇಶೋತ್ಸವ ಮಂಡಳಿಗಳು ಸಾವರ್ಕರ್ ಭಾವಚಿತ್ರವನ್ನು ಬಳಸುತ್ತಾರೆ ಎಂದು ಶಾಸಕರಾದ ಅನಿಲ ಬೆನಕ, ಅಭಯ್ ಪಾಟೀಲ ತಿಳಿಸಿದ್ದಾರೆ.
ಬೆಳಗಾವಿಯ ಗಣೇಶೋತ್ಸವಕ್ಕೆ ತನ್ನದೇ ಆದ ಶತಮಾನದ ಇತಿಹಾಸವಿದೆ. ಲೋಕಮಾನ್ಯ ಬಾಲಗಂಗಾಧರ ತಿಲಕ್ ಬೆಳಗಾವಿಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ ನೀಡಿದ್ದರು. ಅಂದಿನಿಂದಲೂ ಕುಂದಾ ನಗರಿಯಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತದೆ. ನಗರದಾದ್ಯಂತ ಸುಮಾರು 350ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಂದ ಗಣೇಶಮೂರ್ತಿಯನ್ನು 11 ದಿನಗಳ ಕಾಲ ಪ್ರತಿಷ್ಠಾಪಿಸಿ ಕೊನೆಗೆ ಅದ್ಧೂರಿಯಾಗಿ ಮೆರವಣಿಗೆ ಮಾಡಿ ನಿಮಜ್ಜನ ಮಾಡಲಾಗುತ್ತದೆ.
ಚೌತಿಯಲ್ಲಿ ಸಾವರ್ಕರ್ ಇತಿಹಾಸ ತಿಳಿಸುತ್ತೇವೆ..ಶಾಸಕ ಅನಿಲ್ ಬೆನಕೆ ವಿಪಕ್ಷದವರು ಇತಿಹಾಸ ಓದಲಿ :ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ಮಾತನಾಡಿ, 'ಯಾವ ಯುವಕ ಮಂಡಳದವರು ಸಾವರ್ಕರ್ ಭಾವಚಿತ್ರ ಹಾಕ್ತೀವಿ ಅಂತಾರೆ ಅವರಿಗೆ ನಿಶ್ಚಿತವಾಗಿ ಅವಕಾಶ ನೀಡುತ್ತೇವೆ. ಯಾರು ಹರಿದು ಹಾಕುತ್ತಾರೆ ನಾವು ನೋಡುತ್ತೇವೆ. ಸಾವರ್ಕರ್ ಇಡೀ ದೇಶದ ನಾಯಕರು, ಜಗತ್ತಿಗೆ ಮಾರ್ಗದರ್ಶನ ನೀಡಿದಂತವರು ಎಂದು ಹೇಳಿದರು.
ವಿಪಕ್ಷದವರಿಗೆ ಎಷ್ಟು ಜ್ಞಾನ ಇದೆ, ಅವರು ಅಭ್ಯಾಸ ಮಾಡಿಕೊಳ್ಳಲಿ. ಬ್ರಿಟಿಷ್ ಮ್ಯೂಸಿಯಂನಲ್ಲಿರುವ ದಾಖಲೆ ಪರಿಶೀಲಿಸಲಿ. ಸಾವರ್ಕರ್ ಇತಿಹಾಸವನ್ನು ಇನ್ನೊಮ್ಮೆ ಅಭ್ಯಾಸ ಮಾಡಲಿ, ಅವರ ಜೀವನಚರಿತ್ರೆಯನ್ನು ಮತ್ತೊಮ್ಮೆ ಓದಲಿ. ಸಾವರ್ಕರ್‌ಗೆ ಆದ ಜೈಲು ಶಿಕ್ಷೆ ಯಾವ ಸ್ವಾತಂತ್ರ್ಯ ಸೈನಿಕರಿಗೂ ಆಗಿಲ್ಲ ಎಂದು ಹೇಳಿದರು.
ಚೌತಿಯಲ್ಲಿ ಸಾವರ್ಕರ್ ಇತಿಹಾಸ : ಈ ಬಗ್ಗೆ ಮಾತನಾಡಿದ ಶಾಸಕ ಅನಿಲ್ ಬೆನಕೆ, 'ಪ್ರತಿ ಗಣೇಶೋತ್ಸವ ಮಂಡಳಿಗಳಲ್ಲಿ ಖಂಡಿತ ಸಾವರ್ಕರ್ ಫೋಟೋ ಹಾಕ್ತೀವಿ. ಪ್ರತಿ ವಾರ್ಡ್, ಪ್ರತಿ ಗಲ್ಲಿಯ ಗಣೇಶ ಮಂಟಪಗಳಲ್ಲಿ ಸಾವರ್ಕರ್ ಫೋಟೋ ಅಳವಡಿಸುತ್ತೇವೆ. ಸಾವರ್ಕರ್ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಇದ್ದರು. 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಸಂದರ್ಭದಲ್ಲಿ ಅವರ ಇತಿಹಾಸ ತಿಳಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಸಾವರ್ಕರ್‌ಗೂ ಬೆಳಗಾವಿಗೂ ನಂಟು : ಬೆಳಗಾವಿಗೂ ಸಾವರ್ಕರ್‌ಗೂ ವಿಶೇಷವಾದ ನಂಟಿದೆ. 1950ರಲ್ಲಿ ವಿನಾಯಕ ದಾಮೋದರ ಸಾವರ್ಕರ್ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ 100 ದಿನಗಳ ಕಾಲ ವಿಚಾರಣಾಧೀನ ಕೈದಿಯಾಗಿ ವಾಸವಿದ್ದರು. 1950ರಲ್ಲಿ ಪಾಕಿಸ್ತಾನ ಪ್ರಧಾನಿ ಲಿಯಾಕತ್ ಅಲಿ ಖಾನ್ ಭಾರತ ಭೇಟಿ ವಿರೋಧಿಸಿದ್ದ ವಿನಾಯಕ್ ದಾಮೋದರ್ ಸಾವರ್ಕರ್‌ರನ್ನು ಮುಂಜಾಗ್ರತಾ ಕ್ರಮವಾಗಿ ಅಂದಿನ ಸರ್ಕಾರ ಸಾವರ್ಕರ್‌ರನ್ನು ಬಂಧಿಸಿತ್ತು. ಬಳಿಕ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ 100 ದಿನಗಳ ಕಾಲ ಇರಿಸಲಾಗಿತ್ತು. ಈ ವೇಳೆ ಬಾಂಬೆ ಹೈಕೋರ್ಟ್‌ಗೆ ಸಾವರ್ಕರ್ ಪುತ್ರನಿಂದ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಬಳಿಕ 1950ರ ಜುಲೈ 13ರಂದು ಹಿಂಡಲಗಾ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ :ಸಾವರ್ಕರ್ ಬಿಡುಗಡೆಗಾಗಿ ಬ್ರಿಟಿಷರಿಗೆ ಪತ್ರ ಬರೆದು ಭಿಕ್ಷೆ ಬೇಡಿದ್ದರು: ಶಾಸಕ ಯು ಟಿ ಖಾದರ್