ಕರ್ನಾಟಕ

karnataka

ETV Bharat / city

ಬೆಳಗಾವಿಗೆ ಕೇಂದ್ರದ ಬಂಪರ್ ; ರಾಣಿಚೆನ್ನಮ್ಮ ವಿವಿಯಲ್ಲಿ ವಿಶ್ವದರ್ಜೆಯ ಈಜುಕೊಳ ನಿರ್ಮಾಣ - The Sports Department of the center is Khello India Project

ಕ್ರೀಡಾ ಚಟುವಟಿಗಾಗಿ ರಾಣಿ ಚೆನ್ನಮ್ಮ ವಿವಿ ಕುಲಸಚಿವರು ಕೇಂದ್ರ ಸರ್ಕಾರಕ್ಕೆ ₹50 ಕೋಟಿ ವಿಶೇಷ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಪ್ರಸ್ತಾವನೆ ಹಿನ್ನೆಲೆಯಲ್ಲಿ ವಿವಿಗೆ ಗುರುತಿಸಿರುವ ನೂತನ ಜಾಗಕ್ಕೆ ಭೇಟಿ ನೀಡಿದ ಕೇಂದ್ರ ತಂಡ ಸಕಾರಾತ್ಮಕವಾಗಿ ಸ್ಪಂದಿಸಿದೆ. ಅಲ್ಲದೇ 22 ಕೋಟಿ ವಿಶೇಷ ಅನುದಾನ ನೀಡಬಹುದು ಎಂದೂ ಕ್ರೀಡಾ ಇಲಾಖೆಗೆ ಶಿಫಾರಸು ಮಾಡಿದೆ..

world class swimming poo
ರಾಣಿಚೆನ್ನಮ್ಮ ವಿವಿಯಲ್ಲಿ ವಿಶ್ವದರ್ಜೆಯ ಈಜುಕೊಳ ನಿರ್ಮಾಣ

By

Published : May 16, 2022, 7:33 PM IST

ಬೆಳಗಾವಿ :ರಾಜ್ಯದ ಅತಿದೊಡ್ಡ ವಿಶ್ವವಿದ್ಯಾಲಯ ಎಂಬ ಕೀರ್ತಿಗೆ ಪಾತ್ರವಾಗಿರುವ ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯಲ್ಲಿ ವಿಶ್ವದರ್ಜೆಯ ಈಜುಕೊಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದ ವಿಶ್ವದರ್ಜೆಯ ಈಜುಕೊಳ ಹೊಂದಿರುವ ರಾಜ್ಯದ ಮೊದಲ ವಿವಿ ಎಂಬ ಹೆಗ್ಗಳಿಕೆಗೂ ರಾಣಿಚೆನ್ನಮ್ಮ ವಿವಿ ಪಾತ್ರವಾಗಲಿದೆ. ಕೇಂದ್ರದ ಕ್ರೀಡಾ ಇಲಾಖೆ ಖೇಲೋ ಇಂಡಿಯಾ ಯೋಜನೆಯಡಿ ₹22 ಕೋಟಿ ವಿಶೇಷ ಅನುದಾನ ವಿವಿಗೆ ನೀಡಲು ನಿರ್ಧರಿಸಿದ್ದು, ಶೀಘ್ರವೇ ಅನುಮೋದನೆಯೂ ದೊರೆಯಲಿದೆ.

ಹಿರೇಬಾಗೇವಾಡಿ ಗ್ರಾಮದ ಹೊರವಲಯದಲ್ಲಿ ಈಗಾಗಲೇ ವಿವಿಯ ನೂತನ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಟೆಂಡರ್ ಪ್ರಕ್ರಿಯೆಯೂ ಪ್ರಗತಿಯಲ್ಲಿದ್ದು, ವಿವಿ ಕಟ್ಟಡದ ಜೊತೆಗೆ ಈಜುಕೊಳದ ಕಾಮಗಾರಿಯೂ ಆರಂಭವಾಗಲಿದೆ.

ವಿವಿ ಪ್ರಸ್ತಾವನೆಗೆ ಅಸ್ತು :ಖೇಲೋ ಇಂಡಿಯಾ ಯೋಜನೆಯಡಿ ಕೇಂದ್ರ ಸರ್ಕಾರ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಈಗಾಗಲೇ ಬೆಳಗಾವಿಗೆ ಆರು ಕ್ರೀಡಾ ಅಕಾಡೆಮಿಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಕ್ರೀಡಾ ಚಟುವಟಿಗಾಗಿ ರಾಣಿ ಚೆನ್ನಮ್ಮ ವಿವಿ ಕುಲಸಚಿವರು ಕೇಂದ್ರ ಸರ್ಕಾರಕ್ಕೆ ₹50 ಕೋಟಿ ವಿಶೇಷ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು.

ರಾಣಿ ಚೆನ್ನಮ್ಮ ವಿವಿಯಲ್ಲಿ ವಿಶ್ವದರ್ಜೆಯ ಈಜುಕೊಳ ನಿರ್ಮಾಣ..

ಪ್ರಸ್ತಾವನೆ ಹಿನ್ನೆಲೆಯಲ್ಲಿ ವಿವಿಗೆ ಗುರಿತಿಸಿರುವ ನೂತನ ಜಾಗಕ್ಕೆ ಭೇಟಿ ನೀಡಿದ ಕೇಂದ್ರ ತಂಡ ಸಕಾರಾತ್ಮಕವಾಗಿ ಸ್ಪಂದಿಸಿದೆ. ಅಲ್ಲದೇ ₹22 ಕೋಟಿ ವಿಶೇಷ ಅನುದಾನ ನೀಡಬಹುದು ಎಂದೂ ಕ್ರೀಡಾ ಇಲಾಖೆಗೆ ಶಿಫಾರಸು ಮಾಡಿದೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಡ ತಂಡದ ಶಿಫಾರಸ್ಸಿಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಶೀಘ್ರವೇ ಅನುಮೋದಲನೆ ನೀಡಲು ಒಪ್ಪಿದ್ದಾರೆ. ಹೀಗಾಗಿ, ರಾಜ್ಯದಲ್ಲಿರುವ ಸರ್ಕಾರಿ ಸ್ವಾಮ್ಯದ 33 ವಿವಿಗಳ ಪೈಕಿ ಎಲ್ಲೂ ವಿಶ್ವದರ್ಜೆಯ ಈಜುಕೊಳ ಇಲ್ಲ. ಇದೀಗ ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯಲ್ಲಿ ವಿಶ್ವದರ್ಜೆಯ ಈಜುಕೊಳ ನಿರ್ಮಾಣವಾಗಲಿದ್ದು, ರಾಜ್ಯದಲ್ಲೇ ಮೊದಲು ಎಂಬುವುದು ವಿಶೇಷ.

ಒಳಾಂಗಣ ಕ್ರೀಡಾಂಗಣವೂ ನಿರ್ಮಾಣ :ಕೇಂದ್ರ ಸರ್ಕಾರ ಮಂಜೂರು ಮಾಡಲಿರುವ 22 ಕೋಟಿ ವೆಚ್ಚದಲ್ಲಿ ವಿಶ್ವದರ್ಜೆಯ ಈಜುಕೊಳದ ಜೊತೆಗೆ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಹಾಗೂ ಅಥ್ಲೆಟಿಕ್ಸ್ ಮೈದಾನ ನಿರ್ಮಾಣವೂ ಆಗಲಿದೆ. ಅಂದಾಜು ₹15 ಕೋಟಿ ವೆಚ್ಚದಲ್ಲಿ ವಿಶ್ವದರ್ಜೆಯ ಈಜುಕೊಳ, 4 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ಹಾಗೂ 3 ಕೋಟಿ ವೆಚ್ಚದಲ್ಲಿ ಅಥ್ಲೆಟಿಕ್ಸ್ ಮೈದಾನವೂ ನಿರ್ಮಾಣವಾಗಲಿದೆ. ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್, ವಾಲಿಬಾಲ್, ಹ್ಯಾಂಡ್‍ಬಾಲ್, ಟೇಬಲ್ ಟೆನ್ನಿಸ್ ಸೇರಿ ವಿವಿಧ ಕ್ರೀಡೆಗಳ ಅಂಕಣಗಳು ನಿರ್ಮಾಣಗೊಳ್ಳಲಿವೆ. ಸಿಂಥೆಟಿಕ್ ಟ್ರ್ಯಾಕ್ ಸೇರಿದಂತೆ ಸುಸಜ್ಜಿತ ಅಥ್ಲೆಟಿಕ್ಸ್ ಟ್ರ್ಯಾಕ್ ನಿರ್ಮಾಣವಾಗಲಿದೆ.

ಕ್ರೀಡಾ ಸಾಧನೆಗೆ ಅನುಕೂಲ :ಧಾರವಾಡದ ಕರ್ನಾಟಕ ವಿವಿಯಿಂದ ಪ್ರತ್ಯೇಕವಾದ ರಾಣಿ ಚೆನ್ನಮ್ಮ ವಿವಿ ಕಳೆದೊಂದು ದಶಕಗಳಿಂದ ಸ್ವಂತ ಕಟ್ಟಡ ಇರಲಿ, ಕನಿಷ್ಠ ಸೌಲಭ್ಯಗಳು ಇಲ್ಲಿರಲಿಲ್ಲ. ಮೂಲಸೌಕರ್ಯ ಅಲಭ್ಯತೆ ನಡುವೆಯೂ ವಿವಿ ವಿದ್ಯಾರ್ಥಿಗಳು ವಿವಿ ಮಟ್ಟದಲ್ಲಿ ಅಪೂರ್ವ ಸಾಧನೆ ಮಾಡುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರದ ವಿಶೇಷ ಅನುದಾನದಲ್ಲಿ ಕ್ರೀಡಾಂಗಣ ಆಗುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳ ಸಾಧನೆಗೆ ಅನುಕೂಲವಾಗಲಿದೆ.

ಕನಿಷ್ಠ 7-8 ಕ್ರೀಡೆಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದವರೆಗೆ ಸಾಧನೆ ಮಾಡಲು ಅನುಕೂಲವಾಗಲಿದೆ. ಸುಸಜ್ಜಿತ ಮೈದಾನಗಳು ಆದಷ್ಟು ಬೇಗ ನಿರ್ಮಾಣವಾಗುವ ಜೊತೆಗೆ ಇಲ್ಲಿನ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ತರಬೇತುದಾರರ ಆಯ್ಕೆಯ ಜವಾಬ್ದಾರಿಯೂ ವಿವಿ ಮೇಲಿದೆ. ಕೇಂದ್ರ ಸರ್ಕಾರವೇನೋ ರಾಣಿ ಚೆನ್ನಮ್ಮ ವಿವಿಗೆ ಕ್ರೀಡಾ ಚಟುವಟಿಕೆಯ ಉತ್ತೇಜನಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಇದರ ಲಾಭವೂ ವಿದ್ಯಾರ್ಥಿಗಳಿಗೆ ಆಗಬೇಕು. ರಾಷ್ಟ್ರಮಟ್ಟದಲ್ಲಿ ಈ ಭಾಗದ ಕ್ರೀಡಾಪಟುಗಳು ಮಿಂಚು ಹರಿಸಿದರೆ ಮಾತ್ರ ವಿಶೇಷ ಅನುದಾನದ ಪ್ರಯೋಜನ ಆಗಲಿದೆ.

ಇದನ್ನೂ ಓದಿ:ಅಮೆಜಾನ್​ ಪ್ರೈಮ್​​ನಲ್ಲಿ 'ಕೆಜಿಎಫ್​​ 2' .. ಸಿನಿಮಾ ವೀಕ್ಷಣೆ ಮಾಡುವುದು ಹೇಗೆ!?

ABOUT THE AUTHOR

...view details