ಹೈದರಾಬಾದ್: ನಿಮಗೆ ಸಾಲ ನೀಡುವ ಮುನ್ನ ಬ್ಯಾಂಕ್‌ಗಳು ಮೊದಲಿಗೆ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತವೆ ಎಂಬುದು ಹೊಸ ಸಂಗತಿಯೇನಲ್ಲ. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿಲ್ಲವಾದರೆ ನಿಮಗೆ ಸಾಲ ಸಿಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಹಾಗಾಗಿ ಉತ್ತಮ ಕ್ರೆಡಿಟ್ ಸ್ಕೋರ್ ಇರಿಸಿಕೊಳ್ಳಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ನೀವು ತೆಗೆದುಕೊಳ್ಳಬೇಕು. ಕೆಲವೊಮ್ಮೆ, ನೀವು ನಿಯಮಿತವಾಗಿ ಕಂತುಗಳನ್ನು ಪಾವತಿಸುತ್ತಿದ್ದರೂ ಸಹ ಕ್ರೆಡಿಟ್ ಸ್ಕೋರ್ ಕಡಿಮೆಯಾಗಿರಬಹುದು. ಇಂಥ ತಪ್ಪುಗಳನ್ನು ಕ್ರೆಡಿಟ್ ಬ್ಯೂರೋ ಸರಿಪಡಿಸುವಂತೆ ಮಾಡಬೇಕಾಗಿರುವುದು ನಿಮ್ಮ ಕರ್ತವ್ಯ. ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಬ್ಯಾಂಕ್‌ಗಳು 50 ಬೇಸಿಸ್ ಪಾಯಿಂಟ್‌ಗಳ ಬಡ್ಡಿ ರಿಯಾಯಿತಿ ನೀಡುತ್ತವೆ. ದೀರ್ಘಾವಧಿ ಸಾಲದ ಮೇಲೆ ಶೇಕಡ ಅರ್ಧಕ್ಕಿಂತ ಕಡಿಮೆ ರಿಯಾಯಿತಿ ಇದ್ದರೂ ಹೊರೆ ಗಣನೀಯವಾಗಿ ಇಳಿಯುತ್ತದೆ. ಈ ಸಂದರ್ಭದಲ್ಲಿ, ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್ ನಿರ್ಣಾಯಕವಾಗುತ್ತವೆ.
ಕ್ರೆಡಿಟ್ ರಿಪೋರ್ಟ್ನಲ್ಲಿ ನಿಮ್ಮೆಲ್ಲ ವಿವರಗಳು ಲಭ್ಯ:ನೀವು ಪಡೆದ ಸಾಲಗಳು, ಅವುಗಳನ್ನು ಹೇಗೆ ಪಾವತಿಸುತ್ತಿರುವಿರಿ, ಕ್ರೆಡಿಟ್ ಕಾರ್ಡ್ ಬಿಲ್‌ಗಳು, ಸಾಲಕ್ಕಾಗಿ ಮಾಡಿದ ವಿಚಾರಣೆಗಳು, ಬ್ಯಾಂಕ್ ಖಾತೆಗಳ ಸಂಖ್ಯೆ ಮುಂತಾದ ಹಲವು ವಿವರಗಳು ಕ್ರೆಡಿಟ್ ರಿಪೋರ್ಟ್ನಲ್ಲಿ ಗೋಚರಿಸುತ್ತವೆ.
ಕ್ರೆಡಿಟ್ ರಿಪೋರ್ಟ್ ಪರಿಶೀಲಿಸುವಾಗ ಮೊದಲು ನಿಮ್ಮ ಹೆಸರು, ಪ್ಯಾನ್, ಮೊಬೈಲ್, ಇ-ಮೇಲ್, ಬ್ಯಾಂಕ್ ಖಾತೆ ವಿವರಗಳು ಸರಿಯಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಿ. ನಿಮ್ಮ ರದ್ದಾದ ಖಾತೆಗಳು ಮತ್ತು ತೀರಿಸಿದ ಸಾಲಗಳ ವಿವರಗಳು ಸಹ ಅದರಲ್ಲಿರುತ್ತವೆ. ಆದ್ದರಿಂದ, ಈ ವಿವರಗಳನ್ನು ಎರಡೆರಡು ಬಾರಿ ಪರಿಶೀಲಿಸಿ. ಇದರಲ್ಲಿ ಯಾವುದಾದರೂ ನಿಮಗೆ ಸಂಬಂಧಿಸದ ಮಾಹಿತಿ ಇದ್ದರೆ ನೋಡಿಕೊಳ್ಳಿ. ಯಾವುದೇ ತಪ್ಪುಗಳಿದ್ದರೆ ಪರಿಶೀಲಿಸಲು ಮುಂದಾಗಿ.
ಸಣ್ಣ ಸಣ್ಣ ವಿಷಯಗಳೂ ನಿಮ್ಮ ಕ್ರೆಡಿಟ್ ಸ್ಕೋರ್ ತಗ್ಗಿಸಬಹುದು: ತುಂಬಾ ಸಣ್ಣ ವಿಷಯಗಳಿಂದಲೂ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗುವ ಸಾಧ್ಯತೆಗಳಿರುತ್ತವೆ. ನೀವು ಎಂದಿಗೂ ತೆಗೆದುಕೊಳ್ಳದ ಲೋನ್, ನಿಮ್ಮ ಹೆಸರಿನಲ್ಲಿ ಸಾಲದ ವಿಚಾರಣೆಗಳು, ಸಮಯಕ್ಕೆ EMI ಗಳನ್ನು ಪಾವತಿಸಿದರೂ 'ಡೀಫಾಲ್ಟ್' ತೋರಿಸುವುದು, EMI ಮೊತ್ತದಲ್ಲಿ ವ್ಯತ್ಯಾಸಗಳು, ವಿಳಾಸ ಮತ್ತು ಹೆಸರಿನಲ್ಲಿ ವ್ಯತ್ಯಾಸ ಹೀಗೆ ಅನೇಕ ಲೋಪಗಳಿರಬಹುದು. ಅಂಥ ವ್ಯತ್ಯಾಸಗಳನ್ನು ಲಿಖಿತವಾಗಿ ಕ್ರೆಡಿಟ್ ಬ್ಯೂರೋಗೆ ವರದಿ ಮಾಡಬೇಕು. ಈಗ ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಬ್ಯೂರೋಗಳು ಸ್ಕೋರ್ ಒದಗಿಸುತ್ತಿವೆ.