ನವದೆಹಲಿ: ಭಾರತೀಯ ಕ್ರಿಪ್ಟೋ ಕರೆನ್ಸಿ ಎಕ್ಸ್ಚೇಂಜ್ ವಜೀರ್ ಎಕ್ಸ್‌ನಲ್ಲಿನ ವಹಿವಾಟು 2023ರಲ್ಲಿ 1 ಬಿಲಿಯನ್ ಡಾಲರ್ಗೆ ಇಳಿಕೆಯಾಗಿದೆ. 2022ಕ್ಕೆ ಹೋಲಿಸಿದರೆ ವಜೀರ್ ಎಕ್ಸ್‌ನಲ್ಲಿನ ವಹಿವಾಟು ಶೇಕಡಾ 90ರಷ್ಟು ಭಾರಿ ಕುಸಿತವಾಗಿದೆ. ಹೊಸ ನಿಯಮಗಳನ್ನು ಪಾಲಿಸುವಂತೆ ಸರ್ಕಾರದ ನಿರ್ದೇಶನ ಮತ್ತು ಕ್ರಿಪ್ಟೋ ವಹಿವಾಟಿನ ಮೇಲೆ ಭಾರಿ ತೆರಿಗೆ ವಿಧಿಸಿರುವುದು ಇದಕ್ಕೆ ಕಾರಣವಾಗಿದೆ. ಕಳೆದ ವರ್ಷ, ಭಾರತ ಸರ್ಕಾರವು ವರ್ಚುವಲ್ ಕರೆನ್ಸಿಗಳ ಮೇಲೆ ಶೇಕಡಾ 30ರಷ್ಟು ತೆರಿಗೆ ಮತ್ತು ಪ್ರತಿ ಕ್ರಿಪ್ಟೋ ವಹಿವಾಟಿಗೆ ಶೇಕಡಾ 1ರಷ್ಟು ಕಡಿತವನ್ನು ಜಾರಿಗೊಳಿಸಿದೆ.
ಟೆಕ್ ಕ್ರಂಚ್ ವರದಿಯ ಪ್ರಕಾರ, ನಿಶ್ಚಲ್ ಶೆಟ್ಟಿ ನೇತೃತ್ವದ ವಜೀರ್ ಎಕ್ಸ್‌ನಲ್ಲಿನ ಕ್ರಿಪ್ಟೋ ವ್ಯಾಪಾರವು 2022ಕ್ಕೆ ಹೋಲಿಸಿದರೆ ಶೇಕಡಾ 90ರಷ್ಟು ಕುಸಿದಿದೆ. 2022ರಲ್ಲಿ ವಜೀರ್ ಎಕ್ಸ್ನಲ್ಲಿ 10 ಬಿಲಿಯನ್ ಡಾಲರ್ ಮತ್ತು 2021ರಲ್ಲಿ 43 ಬಿಲಿಯನ್ ಡಾಲರ್ ಮೌಲ್ಯದ ಕ್ರಿಪ್ಟೊ ವ್ಯಾಪಾರ ವಹಿವಾಟು ನಡೆದಿತ್ತು.
ಕಳೆದ ವರ್ಷ, ಜಾರಿ ನಿರ್ದೇಶನಾಲಯ (ಇಡಿ) ಕ್ರಿಪ್ಟೋಕರೆನ್ಸಿಗಳಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ತಡೆ ಕಾಯ್ದೆ, 2002 (ಪಿಎಂಎಲ್ಎ) ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ, 1999 (ಫೆಮಾ) ನಿಬಂಧನೆಗಳ ಅಡಿಯಲ್ಲಿ ಹಲವಾರು ಪ್ರಕರಣಗಳ ಬಗ್ಗೆ ತನಿಖೆ ನಡೆಸಿತ್ತು. 16 ಭಾರತೀಯ ಫಿನ್ಟೆಕ್ ಸಂಸ್ಥೆಗಳು ಮತ್ತು ಲೋನ್ ಆ್ಯಪ್ಗಳ ಅನಾಮಧೇಯ ವಿದೇಶಿ ವ್ಯಾಲೆಟ್ಗಳಿಗೆ ವಜೀರ್ ಎಕ್ಸ್ ಅಕ್ರಮವಾಗಿ ಹಣ ವರ್ಗಾಯಿಸಿತ್ತು ಎಂಬ ಆರೋಪಗಳ ಬಗ್ಗೆ ಜಾರಿ ನಿರ್ದೇಶನಾಲಯ ಈಗಾಗಲೇ ತನಿಖೆ ನಡೆಸುತ್ತಿದೆ. ತನಿಖೆಯ ಭಾಗವಾಗಿ 64.67 ಕೋಟಿ ರೂಪಾಯಿ ಮೊತ್ತದ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ತನಿಖೆಯ ನಂತರ ವಜೀರ್ ಎಕ್ಸ್ ಬ್ಯಾಂಕ್ ಖಾತೆಗಳ ಮೇಲಿನ ನಿರ್ಬಂಧವನ್ನು ಇಡಿ ತೆಗೆದು ಹಾಕಿತ್ತು.