ಹೈದರಾಬಾದ್:ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂಬರುವ ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಅಥವಾ ಲೇಖಾನುದಾನವನ್ನು ಮಂಡಿಸುವ ಸಾಧ್ಯತೆ ಇದೆ. ಇದಕ್ಕಾಗಿ ಅವರು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಮುಂದಿನ ಹಣಕಾಸು ವರ್ಷದ ಸರ್ಕಾರದ ನಿರೀಕ್ಷಿತ ಆದಾಯ ಮತ್ತು ವೆಚ್ಚಗಳ ಅಂದಾಜುಗಳನ್ನು ಈ ಲೇಖಾನುದಾನ ಒಳಗೊಂಡಿರಲಿದೆ.
ಪ್ರಸ್ತುತ17ನೇ ಲೋಕಸಭೆಗೆ ಜನರು ನೀಡಿರುವ ಆದೇಶವು ಈ ವರ್ಷದ ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಬಜೆಟ್ ಅಧಿವೇಶನದಲ್ಲಿ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ಬಾರಿ ಸರ್ಕಾರ ಲೇಖಾನುದಾನವನ್ನು ಮಂಡಿಸಿ ಅದಕ್ಕೆ ಅನುಮೋದನೆ ಪಡೆದುಕೊಳ್ಳಲಿದೆ. ಆದಾಗ್ಯೂ, ಸಾಮಾನ್ಯ ಬಜೆಟ್‌ನಂತೆ, ಈ ವರ್ಷವೂ ವೋಟ್ ಆನ್ ಅಕೌಂಟ್‌ನಲ್ಲಿ ಹಣಕಾಸು ಮಸೂದೆ ಲೋಕಸಭೆಯಲ್ಲಿ ಮಂಡಿಸಲಾಗುವುದು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುವ ಲೇಖಾನುದಾನಕ್ಕೆ ಸದನದ ಅನುಮೋದನೆ ಪಡೆಯಬೇಕಾಗುತ್ತದೆ.
ಏನಿದು ಹಣಕಾಸು ವಿಧೇಯಕ:ಬಜೆಟ್ ಪ್ರಸ್ತಾವನೆಗಳು ಭಾರತದ ಕನ್ಸಾಲಿಡೇಟೆಡ್ ಫಂಡ್‌ನಿಂದ ಹಣವನ್ನು ಹಿಂಪಡೆಯುವುದನ್ನು ಒಳಗೊಂಡಿರುವುದರಿಂದ ಮತ್ತು ಅವು ತೆರಿಗೆ ಪ್ರಸ್ತಾಪಗಳನ್ನು ಒಳಗೊಂಡಿರುತ್ತವೆ. ಆದ್ದರಿಂದ ಸರ್ಕಾರವು ಭಾರತದ ಕನ್ಸಾಲಿಡೇಟೆಡ್ ಫಂಡ್‌ನಿಂದ ಹಣವನ್ನು ಹಿಂಪಡೆಯಲು ಮತ್ತು ಯಾವುದೇ ತೆರಿಗೆಯನ್ನು ವಿಧಿಸಲು ಅಥವಾ ಯಾವುದೇ ಬದಲಾವಣೆಗಳನ್ನು ಮಾಡಲು ವಿದೇಯಕವನ್ನು ಮಂಡಿಸಿ, ಉಭಯ ಸದನಗಳಲ್ಲಿ ಅಂಗೀಕಾರ ಪಡೆದು ಕಾನೂನು ಮಾಡಬೇಕಾದ ಅಗತ್ಯವಿದೆ. ಬಜೆಟ್ ಪ್ರಸ್ತಾವನೆಗಳನ್ನು ಜಾರಿಗೊಳಿಸುವ ಮಸೂದೆಯನ್ನು ಹಣಕಾಸು ಮಸೂದೆ ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಹಣಕಾಸು ಮಸೂದೆಗಳಿಗೆ ಸಂಬಂಧಿಸಿದ ವಿಶೇಷ ನಿಬಂಧನೆಗಳೊಂದಿಗೆ ವ್ಯವಹರಿಸುವ ಆರ್ಟಿಕಲ್ 117 ರ ಅಡಿಯಲ್ಲಿ ಈ ಹಣಕಾಸು ವಿಧೇಯಕಗಳನ್ನು ಇರಿಸಲಾಗಿದೆ.