ನವದೆಹಲಿ: ಪಿಸಿ, ಲ್ಯಾಪ್ಟಾಪ್ ಮತ್ತು ಟ್ಯಾಬ್ಲೆಟ್ಗಳನ್ನು ಆಮದು ಮಾಡಿಕೊಳ್ಳಲು ವಿಶೇಷ ಅನುಮತಿ ಪಡೆಯುವ ನಿರ್ಬಂಧನೆಯ ಗಡುವನ್ನು ನವೆಂಬರ್ 1ರ ಆಚೆಗೆ ವಿಸ್ತರಿಸಬೇಕು ಎಂದು ದೇಶದ ತಂತ್ರಜ್ಞಾನ ಉತ್ಪಾದನಾ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿವೆ. ಹೊಸ ಮಾರ್ಗಸೂಚಿಗಳ ಪ್ರಕಾರ ಉತ್ಪಾದನೆ ಅಥವಾ ಜೋಡಣೆ ಘಟಕಗಳನ್ನು ವಿನ್ಯಾಸಗೊಳಿಸಲು ಮತ್ತು ಸ್ಥಾಪಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುವುದರಿಂದ ಗಡುವನ್ನು ಕನಿಷ್ಠ 1 ವರ್ಷ ವಿಸ್ತರಿಸಬೇಕೆಂದು ಎಚ್ಪಿ, ಆಪಲ್ ಮತ್ತು ಡೆಲ್ನಂಥ ಉನ್ನತ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿಗಳು ಸರಕಾರವನ್ನು ಒತ್ತಾಯಿಸಿವೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಎಂಇಐಟಿವೈ) ಅಧಿಕಾರಿಗಳೊಂದಿಗಿನ ಸಭೆಯಲ್ಲಿ, ಪ್ರಮುಖ ಉದ್ಯಮ ಸಂಸ್ಥೆಗಳಾದ ಐಟಿ ಹಾರ್ಡ್ ವೇರ್ ಉತ್ಪಾದನಾ ಸಂಘ (ಎಂಎಐಟಿ) ಮತ್ತು ಇಂಡಿಯಾ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಸಹ ಭಾಗವಹಿಸಿದ್ದವು. ದೇಶದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಹೆಚ್ಚಿನ ಸಮಯ ಬೇಕು ಎಂದು ಟೆಕ್ ಕಂಪನಿಗಳು ಸರ್ಕಾರಕ್ಕೆ ತಿಳಿಸಿವೆ ಎಂದು ಮೂಲಗಳು ಹೇಳಿವೆ.
ವರದಿಗಳ ಪ್ರಕಾರ ಕೆಲ ಪ್ರಮುಖ ಜಾಗತಿಕ ಕಂಪನಿಗಳು ಸೇರಿದಂತೆ ಸುಮಾರು 44 ಕಂಪನಿಗಳು ಹಾರ್ಡ್ವೇರ್ಗಾಗಿ ಉತ್ಪಾದನಾ-ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) 2.0 ಯೋಜನೆಯಡಿ ಪ್ರೋತ್ಸಾಹಕ್ಕಾಗಿ ಅರ್ಜಿಗಳನ್ನು ಸಲ್ಲಿಸಿವೆ. ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯದ (ಡಿಜಿಎಫ್ಟಿ) ಅಧಿಸೂಚನೆಯ ಪ್ರಕಾರ, ನವೆಂಬರ್ 1, 2023 ರಿಂದ ಜಾರಿಗೆ ಬರುವಂತೆ ನಿರ್ಬಂಧಿತ ಆಮದು ಸರಕುಗಳ ಕ್ಲಿಯರೆನ್ಸ್ಗಾಗಿ ಸೂಕ್ತ ಲೈಸೆನ್ಸ್ ಪಡೆಯುವುದು ಅಗತ್ಯವಾಗಲಿದೆ.