ಬ್ಯಾಂಕಾಕ್:ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಸಂಘರ್ಷದ ನಡುವೆ ವಿಶ್ವ ಮಾರುಕಟ್ಟೆಗಳು ಉತ್ತಮ ವಹಿವಾಟು ನಡೆಸುತ್ತಿವೆ. ಅಮೆರಿಕದ ಷೇರುಗಳು ಚೇತರಿಸಿಕೊಂಡಿದ್ದು, ತೈಲ ಬೆಲೆ ಇಳಿಕೆಯಾಗಿದೆ. ವಿಶ್ವದ ಎಲ್ಲ ಮಾರುಕಟ್ಟೆಗಳಲ್ಲಿ ಹೂಡಿಕೆದಾರರ ಷೇರುಗಳು ಪ್ರಗತಿ ಕಂಡಿವೆ.
ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಯುದ್ಧವು ವಿಶ್ವ ಆರ್ಥಿಕತೆ ಮತ್ತು ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ ಎಂದೇ ಭಾವಿಸಲಾಗಿತ್ತು. ಇದ್ಯಾವುದೂ ವಹಿವಾಟಿಗೆ ಸಮಸ್ಯೆಯಾಗಿಲ್ಲ. ಆದರೆ ಇನ್ನೊಂದೆಡೆ, ಚೀನಾದ ಆರ್ಥಿಕತೆ ಕುಸಿತ ಕಾಣುತ್ತಿರುವುದು ಆತಂಕ ಉಂಟುಮಾಡಿದೆ.
ಚೀನಾದಲ್ಲಿ ಹಿಂದಿನ ತ್ರೈಮಾಸಿಕದಲ್ಲಿ ಶೇಕಡಾ 6.3ರಷ್ಟು ಆರ್ಥಿಕ ಪ್ರಗತಿ ಕಂಡಿತ್ತು. ಇದಾದ ಬಳಿಕ ಕುಸಿದು ವಾರ್ಷಿಕ ಬೆಳವಣಿಗೆಯು ಶೇಕಡಾ 5ಕ್ಕಿಂತ ಕಡಿಮೆಯಾಗಿದೆ. ದುರ್ಬಲ ಚೀನೀ ಆರ್ಥಿಕತೆಯು ಪ್ರಾದೇಶಿಕ ಮತ್ತು ಜಾಗತಿಕ ವ್ಯಾಪಾರ, ಉತ್ಪಾದನೆಯ ಮೇಲೆ ಪ್ರಭಾವ ಬೀರಿದೆ.
ವಿಶ್ವದ ಮಾರುಕಟ್ಟೆಗಳ ಪ್ರಗತಿ ದರ:ಭಾರತದ ಸೆನ್ಸೆಕ್ಸ್ ಶೇಕಡಾ 0.6 ರಷ್ಟು, ಅಮೆರಿಕದ ಎಸ್ ಆ್ಯಂಡ್ ಪಿ ಮತ್ತು ಕೈಗಾರಿಕೆಗಳ ಕ್ಷೇತ್ರ ಶೇಕಡಾ 0.1 ರಷ್ಟು, ಏಷ್ಯಾದ ಮಾರುಕಟ್ಟೆಯಲ್ಲಿ ಟೋಕಿಯೊದ ನಿಕ್ಕಿ ಶೇಕಡಾ 1.2 ರಷ್ಟು ಏರಿಕೆ ಕಂಡಿದೆ. ಹಾಂಕಾಂಗ್‌ನಲ್ಲಿ ಹ್ಯಾಂಗ್ ಸೆಂಗ್ ಶೇಕಡಾ 0.7 ರಷ್ಟು, ಶಾಂಘೈ ಕಾಂಪೋಸಿಟ್ ಸೂಚ್ಯಂಕವು ಶೇಕಡಾ 0.3 ರಷ್ಟು, ಆಸ್ಟ್ರೇಲಿಯಾದಲ್ಲಿ S&P/ASX ಶೇಕಡಾ 0.5 ರಷ್ಟು, ಥಾಯ್ಲೆಂಡ್‌ನ ಸೆಟ್ ಮಾರುಕಟ್ಟೆ ಶೇಕಡಾ 0.5 ರಷ್ಟು ಏರಿಕೆ ಕಂಡಿದೆ.
ಇಸ್ರೇಲ್ ಭೂಸೇನಾ ಪಡೆಗಳು ಗಾಜಾದ ನಗರವನ್ನು ಆಕ್ರಮಿಸಲು ತಯಾರಿ ಮತ್ತು ಲೆಬನಾನ್‌ನೊಂದಿಗೂ ಇಸ್ರೇಲ್ ಸಂಘರ್ಷಕ್ಕಿಳಿಯುವ ಆತಂಕ ಉಂಟಾಗಿತ್ತು. ಆದಾಗ್ಯೂ ಮಾರುಕಟ್ಟೆಗಳು ಸದ್ಯಕ್ಕೆ ಚೇತರಿಸಿಕೊಂಡಂತೆ ಕಂಡುಬಂದಿದೆ. ಅಮೆರಿಕದ ವಾಲ್ ಸ್ಟ್ರೀಟ್‌ನಲ್ಲಿ ಸೂಚ್ಯಂಕವು ಶೇಕಡಾ 1.1 ರಷ್ಟು ಏರಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್ ಅವರು ಇಸ್ರೇಲ್ ಜೊತೆಗೆ ನಡೆಸುತ್ತಿರುವ ರಾಜತಾಂತ್ರಿಕ ಮಾತುಕತೆಗಳು ಹೂಡಿಕೆದಾರರ ವಿಶ್ವಾಸ ಗಳಿಸಿವೆ. ಹೀಗಾಗಿ ಮಾರುಕಟ್ಟೆಗಳಲ್ಲಿ ವ್ಯತಿರಿಕ್ತ ಪರಿಣಾಮಗಳು ಬೀಳುತ್ತಿಲ್ಲ.
ತೈಲ ದರ ಕುಸಿತ:ಯುದ್ಧದ ಕಾರಣದಿಂದಾಗಿ ಇರಾನ್‌ನಿಂದ ಕಚ್ಚಾ ತೈಲ ಪೂರೈಕೆಗೆ ಅಡ್ಡಿಯಾಗುವ ಆತಂಕವಿತ್ತು. ಆದರೆ, ಯುದ್ಧ ಶುರುವಾಗಿ ವಾರದ ಕಳೆದರೂ ಯಾವುದೇ ಸಮಸ್ಯೆ ಉಂಟಾಗದ ಕಾರಣ ತೈಲ ಬೆಲೆಗಳು ಇಳಿಕೆ ಕಂಡಿವೆ. ನ್ಯೂಯಾರ್ಕ್ ಮರ್ಕೆಂಟೈಲ್ ಎಕ್ಸ್‌ಚೇಂಜ್‌ನಲ್ಲಿ ಅಮೆರಿಕದ ಬೆಂಚ್‌ಮಾರ್ಕ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 86.68 ಡಾಲರ್ ಇತ್ತು. ಸೋಮವಾರದ ಹೊತ್ತಿಗೆ 1.03 ಡಾಲರ್ ಕುಸಿದು 86.66 ಕ್ಕೆ ಸ್ಥಿರವಾಗಿದೆ.
ಇದನ್ನೂ ಓದಿ:ಡೆಲಿವರಿ ಬಾಯ್ಗಳಿಗೂ ಕನಿಷ್ಠ ವೇತನ ಕಾನೂನು ತರಲಿದೆ ಈ ಸರ್ಕಾರ