ಮುಂಬೈ (ಮಹಾರಾಷ್ಟ್ರ): ಮುಂಬೈ ಷೇರುಪೇಟೆಯಲ್ಲಿ ಈಗ ಕರಡಿಯದ್ದೇ ಸಾಮ್ರಾಜ್ಯ,ಕಳೆದ ಒಂದುವಾರದಿಂದ ಷೇರುಪೇಟೆ ಕೆಂಪು ಮಾರ್ಕ್ನಲ್ಲೇ ವ್ಯವಹಾರ ನಡೆಸುತ್ತಿದ್ದು, ಹೂಡಿಕೆದಾರರು ಲಕ್ಷಾಂತರ ಕೋಟಿ ರೂಗಳನ್ನು ಕಳೆದುಕೊಂಡಿದ್ದಾರೆ. ಇಸ್ರೇಲ್ - ಹಮಾಸ್ ಯುದ್ಧ. ಅಮೆರಿಕ ಫೆಡರಲ್ ಬ್ಯಾಂಕ್ ಆರ್ಥಿಕ ನೀತಿ ಘೋಷಣೆಗೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆಯಲ್ಲೂ ಹಿಂಜರಿಕೆ ಕಂಡು ಬರುತ್ತಿದೆ.
ಕಳೆದ ಕೆಲವು ತಿಂಗಳಿಂದ ಏರುಗತಿಯಲ್ಲಿ ಸಾಗುತ್ತಿದ್ದ ಭಾರತೀಯ ಷೇರುಪೇಟೆಯಲ್ಲಿ ಕಳೆದೊಂದು ವಾರದಿಂದ ಬೇರ್ ಆಟ ಶುರುವಾಗಿದೆ. ನಿಫ್ಟಿ ಹಲವು ದಿನಗಳ ಬಳಿಕ 19 ಸಾವಿರಕ್ಕಿಂತ ಕೆಳಮಟ್ಟದಲ್ಲಿ ವ್ಯವಹಾರ ನಡೆಸುತ್ತಿದೆ. ಇನ್ನು 66 ಸಾವಿರದಿಂದ 67 ರ ಆಸುಪಾಸಿನಲ್ಲಿ ವ್ಯವಹಾರ ನಡೆಸುತ್ತಿದ್ದ ಸೆನ್ಸೆಕ್ಸ್ 63500ರ ಆಸು ಪಾಸಿಗೆ ಕುಸಿತ ಕಂಡಿದೆ. ಕಳೆದೊಂದು ವಾರದಲ್ಲಿ ಸೆನ್ಸೆಕ್ಸ್ ಬರೋಬ್ಬರಿ ಮೂರು ಸಾವಿರ ಅಂಕಗಳನ್ನು ಕಳೆದುಕೊಂಡಿದೆ.
ಈ ವಾರದ ಆರಂಭದಿಂದಲೂ ತೀವ್ರ ಕುಸಿತ ಕಾಣುತ್ತಿರುವ ಸೆನ್ಸೆಕ್ಸ್ 481.30 ಪಾಯಿಂಟ್‌ಗಳ ಗಮನಾರ್ಹ ಕುಸಿತ ದಾಖಲಿಸಿದೆ. ಇಂದು ಬೆಳಗ್ಗೆ 63564.74 ನಲ್ಲಿ ಮುಂಬೈ ಷೇರುಪೇಟೆ ಪ್ರಾರಂಭವಾಯಿತು. ಇನ್ನು ನಿಫ್ಟಿ 156.45 ಅಂಕಗಳ ನಷ್ಟದೊಂದಿಗೆ ಅಂದರೆ 18964.75 ನಲ್ಲಿ ವ್ಯವಹಾರ ಆರಂಭಿಸಿತು. ನಿಫ್ಟಿ ಕಂಪನಿಗಳ ಪೈಕಿ ನಾಲ್ಕು ಕಂಪನಿಗಳ ಷೇರುಗಳಷ್ಟೇ ಏರಿಕೆ ಕಂಡರೆ, ಪ್ರಮುಖ 46 ಕಂಪನಿಗಳ ಷೇರುಗಳು ಕುಸಿತ ಕಂಡವು.