ನವದೆಹಲಿ: ಯುಎಇಯಲ್ಲಿ ರುಪೇ ಕಾರ್ಡ್ ವ್ಯವಸ್ಥೆ ಜಾರಿಗೊಳಿಸಲು ಭಾರತ ಮತ್ತು ಯುಎಇ ಮಧ್ಯೆ ಒಪ್ಪಂದ ಏರ್ಪಟ್ಟಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (ಎನ್ಪಿಸಿಐ) ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಯಾದ ಎನ್ಪಿಸಿಐ ಇಂಟರ್ ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (ಎನ್ಐಪಿಎಲ್) ಯುಎಇಯಲ್ಲಿ ಭಾರತದ ಕಾರ್ಡ್ ಯೋಜನೆ (ರುಪೇ) ಅನುಷ್ಠಾನಕ್ಕಾಗಿ ಅಲ್ ಎತಿಹಾದ್ ಪೇಮೆಂಟ್ಸ್ (ಎಇಪಿ) ನೊಂದಿಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ.
ಎಇಪಿ ಇದು ಯುಎಇಯ ಸೆಂಟ್ರಲ್ ಬ್ಯಾಂಕ್ (ಸಿಬಿಎಇ) ನ ಪರೋಕ್ಷ ಅಂಗ ಸಂಸ್ಥೆಯಾಗಿದೆ. ಒಪ್ಪಂದದ ಪ್ರಕಾರ, ಯುಎಇಯ ರಾಷ್ಟ್ರೀಯ ದೇಶೀಯ ಕಾರ್ಡ್ ಯೋಜನೆಯನ್ನು (ಡಿಸಿಎಸ್) ನಿರ್ಮಿಸಲು, ಕಾರ್ಯಗತಗೊಳಿಸಲು ಮತ್ತು ನಿರ್ವಹಿಸಲು ಎನ್ಐಪಿಎಲ್ ಮತ್ತು ಎಇಪಿ ಒಟ್ಟಾಗಿ ಕೆಲಸ ಮಾಡಲಿವೆ. ರುಪೇ ಒಪ್ಪಂದವು ಯುಎಇಯಲ್ಲಿ ಇ - ಕಾಮರ್ಸ್ ಮತ್ತು ಡಿಜಿಟಲ್ ವಹಿವಾಟಿನ ಬೆಳವಣಿಗೆಯನ್ನು ಸುಗಮಗೊಳಿಸುವುದು, ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸುವುದು, ಯುಎಇಯ ಡಿಜಿಟಲೀಕರಣ ಕಾರ್ಯಸೂಚಿಯನ್ನು ಬೆಂಬಲಿಸುವುದು, ಪರ್ಯಾಯ ಪಾವತಿ ಆಯ್ಕೆಗಳನ್ನು ಹೆಚ್ಚಿಸುವುದು, ಪಾವತಿಗಳ ವೆಚ್ಚವನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
ಈ ಒಪ್ಪಂದದ ಉದ್ದೇಶ ಏನು?:ಇತರ ದೇಶಗಳಿಗೆ ತನ್ನ ಕಡಿಮೆ ವೆಚ್ಚದ - ಪರಿಣಾಮಕಾರಿ ಮತ್ತು ಸುರಕ್ಷಿತ ಪಾವತಿ ವ್ಯವಸ್ಥೆಗಳನ್ನು ಸ್ಥಾಪಿಸಲು ಜ್ಞಾನ ಮತ್ತು ಪರಿಣತಿಯನ್ನು ನೀಡುವುದು ಎನ್ಐಪಿಎಲ್ನ ಉದ್ದೇಶವಾಗಿದೆ. ಈ ಧ್ಯೇಯದ ಮುಂದಿನ ಹೆಜ್ಜೆಯಾಗಿ ಈಗ ಎನ್ಐಪಿಎಲ್ ಯುಎಇಯಲ್ಲಿ ರುಪೇ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. ಡಿಸಿಎಸ್ ವ್ಯವಸ್ಥೆಯು ಸಾರ್ವಭೌಮತ್ವ, ಮಾರುಕಟ್ಟೆಯ ವೇಗ, ನಾವೀನ್ಯತೆ, ಡಿಜಿಟಲೀಕರಣ ಮತ್ತು ಕಾರ್ಯತಂತ್ರದ ಸ್ವಾತಂತ್ರ್ಯದ ತತ್ವಗಳನ್ನು ಆಧರಿಸಿದೆ.