ಕರ್ನಾಟಕ

karnataka

ETV Bharat / business

ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸುಭದ್ರ, ಜಾಗತಿಕ ಅಸ್ಥಿರತೆಯ ಪರಿಣಾಮವಿಲ್ಲ: ಆರ್​ಬಿಐ ಗವರ್ನರ್ - ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್

ಭಾರತದ ಬ್ಯಾಂಕಿಂಗ್ ವ್ಯವಸ್ಥೆಯು ಸಶಕ್ತವಾಗಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಕೆಲ ದೇಶಗಳಲ್ಲಿನ ಆರ್ಥಿಕ ಬಿಕ್ಕಟ್ಟು ಭಾರತದ ಮೇಲೆ ಅಷ್ಟೊಂದು ಪರಿಣಾಮ ಬೀರಿಲ್ಲ ಎಂದಿದ್ದಾರೆ.

ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸುಭದ್ರ, ಜಾಗತಿಕ ಅಸ್ಥಿರತೆಯ ಪರಿಣಾಮವಿಲ್ಲ: ಆರ್​ಬಿಐ ಗವರ್ನರ್
Indian banking system strong

By

Published : Apr 27, 2023, 6:29 PM IST

ಮುಂಬೈ: ದೇಶದ ಬ್ಯಾಂಕಿಂಗ್ ವ್ಯವಸ್ಥೆಯು ಬಲಿಷ್ಠವಾಗಿದ್ದು, ಜಾಗತಿಕ ವಿದ್ಯಮಾನಗಳು ಇದರ ಮೇಲೆ ಹೇಳಿಕೊಳ್ಳುವಂಥ ಪರಿಣಾಮ ಬೀರಿಲ್ಲ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಗುರುವಾರ ಆಯೋಜಿಸಲಾದ ರಿಸರ್ವ್ ಬ್ಯಾಂಕ್ ಪ್ರಾಯೋಜಿತ ಕಾಲೇಜ್ ಆಫ್ ಪರವೈಸರ್ಸ್ ಜಾಗತಿಕ ಸಮ್ಮೇಳನದಲ್ಲಿ ಮಾತನಾಡಿದ ದಾಸ್, ಭಾರತೀಯ ಹಣಕಾಸು ವ್ಯವಸ್ಥೆಯು ದೃಢವಾಗಿ ಉಳಿದಿದೆ ಮತ್ತು ಕೆಲ ಮುಂದುವರಿದ ದೇಶಗಳ ಆರ್ಥಿಕತೆಗಳಲ್ಲಿನ ಹಣಕಾಸಿನ ಅಸ್ಥಿರತೆಯು ಯಾವುದೇ ಪ್ರತಿಕೂಲ ಪರಿಣಾಮ ಬೀರಿಲ್ಲ ಎಂದರು.

ಅಮೆರಿಕದ ಪ್ರಮುಖ ಬ್ಯಾಂಕ್ ಆಗಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್ ನಷ್ಟಕ್ಕೀಡಾಗಿ ಮುಚ್ಚಿಹೋದ ಕೆಲ ದಿನಗಳ ನಂತರ ಆರ್​ಬಿಐ ಗವರ್ನರ್ ಅವರ ಈ ಮಾತುಗಳು ಮಹತ್ವ ಪಡೆದುಕೊಂಡಿವೆ. ಭಾರತೀಯ ಬ್ಯಾಂಕ್‌ಗಳು ಅತ್ಯಂತ ಬಿಕ್ಕಟ್ಟಿನ ಸಂದರ್ಭಗಳಲ್ಲಿಯೂ ಕನಿಷ್ಠ ಅಗತ್ಯಕ್ಕಿಂತ ಹೆಚ್ಚಿನ ಬಂಡವಾಳದ ಅನುಪಾತವನ್ನು ಇರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ದಾಸ್ ಹೇಳಿದರು.

ವಿಶ್ವದಲ್ಲಿ ಸಂಪ್ರದಾಯದಿಂದ ಹೊರತುಪಡಿಸಿ ನೀತಿ ನಿಯಮಗಳನ್ನು ಜಾರಿಗೊಳಿಸಲಾಗುತ್ತಿರುವುದರಿಂದ ಹಣಕಾಸು ವಲಯಕ್ಕೆ ಸಂಬಂಧಿಸಿದ ಎಲ್ಲರೂ ಜಾಗರೂಕರಾಗಿರಬೇಕೆಂದು ದಾಸ್ ತಿಳಿಸಿದರು. ಭವಿಷ್ಯದಲ್ಲಿ ಭಾರತದ ಹಣಕಾಸು ವ್ಯವಸ್ಥೆಯನ್ನು ಮತ್ತಷ್ಟು ವೃದ್ಧಿಗೊಳಿಸಲು ಆರ್​ಬಿಐ ಕಟಿ ಬದ್ಧವಾಗಿದೆ ಎಂದು ಅವರು ತಿಳಿಸಿದರು.

4 ಸಹಕಾರಿ ಬ್ಯಾಂಕ್​ಗಳಿಗೆ ದಂಡ: ನಾಲ್ಕು ಸಹಕಾರಿ ಬ್ಯಾಂಕ್‌ಗಳಾದ ಬಾಂಬೆ ಮರ್ಕೆಂಟೈಲ್ ಕೋ - ಆಪರೇಟಿವ್ ಬ್ಯಾಂಕ್, ತಮಿಳುನಾಡು ಸ್ಟೇಟ್ ಅಪೆಕ್ಸ್ ಕೋ-ಆಪರೇಟಿವ್ ಬ್ಯಾಂಕ್, ಜನತಾ ಸಹಕಾರಿ ಬ್ಯಾಂಕ್ ಮತ್ತು ಬರನ್ ನಾಗರಿಕ್ ಸಹಕಾರಿ ಬ್ಯಾಂಕ್‌ಗಳಿಗೆ ವಿವಿಧ ನಿಯಮಗಳ ಉಲ್ಲಂಘನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೋಮವಾರ ದಂಡ ವಿಧಿಸಿದೆ. ಬ್ಯಾಂಕಿಂಗ್ ರೆಗ್ಯುಲೇಷನ್ ಆಕ್ಟ್, 1949 (ಬಿಆರ್ ಆಕ್ಟ್) ಸೆಕ್ಷನ್ 56 ನೊಂದಿಗೆ ಸೆಕ್ಷನ್ 26-ಎ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮುಂಬೈ ಮರ್ಕೆಂಟೈಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮೇಲೆ ರಿಸರ್ವ್ ಬ್ಯಾಂಕ್ 13 ಲಕ್ಷ ರೂಪಾಯಿ ನಗದು ದಂಡವನ್ನು ವಿಧಿಸಿದೆ. ನಿಗದಿತ ಅವಧಿಯೊಳಗೆ ಠೇವಣಿದಾರ ಮತ್ತು ಶಿಕ್ಷಣ ಮತ್ತು ಜಾಗೃತಿ ನಿಧಿಗೆ (DEAF) ಅರ್ಹ ಮೊತ್ತವನ್ನು ವರ್ಗಾಯಿಸಲು ಬ್ಯಾಂಕ್ ವಿಫಲವಾಗಿದೆ ಮತ್ತು ತಡವಾಗಿ ಅದನ್ನು ವರ್ಗಾಯಿಸಿದೆ.

'ಠೇವಣಿಗಳ ಮೇಲಿನ ಬಡ್ಡಿ ದರ' ನಿರ್ದೇಶನಗಳನ್ನು ಅನುಸರಿಸದಿದ್ದಕ್ಕಾಗಿ ಪುಣೆಯ ಜನತಾ ಸಹಕಾರಿ ಬ್ಯಾಂಕ್‌ಗೆ ₹13 ಲಕ್ಷ ದಂಡವನ್ನು ವಿಧಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ಮರಣ ಹೊಂದಿದ ವೈಯಕ್ತಿಕ ಠೇವಣಿದಾರರ ಚಾಲ್ತಿ ಖಾತೆಗಳಲ್ಲಿ ಇರುವ ಬಾಕಿ ಮೊತ್ತದ ಮೇಲೆ ಅನ್ವಯಿಸುವ ಬಡ್ಡಿಯನ್ನು ಪಾವತಿಸಲು ಬ್ಯಾಂಕ್ ವಿಫಲವಾಗಿದೆ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್ (ನಬಾರ್ಡ್) ವಂಚನೆಗಳ ಪರಿಶೀಲನೆ - ಮಾನಿಟರಿಂಗ್ ಮತ್ತು ಮಾರ್ಗಸೂಚಿಗಳು ಕುರಿತು ಹೊರಡಿಸಿದ ನಿರ್ದೇಶನಗಳನ್ನು ಅನುಸರಿಸದಿದ್ದಕ್ಕಾಗಿ ತಮಿಳುನಾಡು ಸ್ಟೇಟ್ ಅಪೆಕ್ಸ್ ಕೋ -ಆಪರೇಟಿವ್ ಬ್ಯಾಂಕ್‌ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 16 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಇದನ್ನೂ ಓದಿ :ರಿಲಯನ್ಸ್​ ಕ್ಯಾಪಿಟಲ್​ ಖರೀದಿಸಿದ ಹಿಂದೂಜಾ ಗ್ರೂಪ್: 9,650 ಕೋಟಿ ರೂ. ಬಿಡ್ಡಿಂಗ್

ABOUT THE AUTHOR

...view details