ನವದೆಹಲಿ : 2022- 2023ರ ಹಣಕಾಸು ವರ್ಷ ಮಾರ್ಚ್ ಅಂತ್ಯಕ್ಕೆ ಕೊನೆಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ನ(ಆರ್‌ಬಿಐ) ಅಡಿಯಲ್ಲಿ ಬರುವ ಎಲ್ಲಾ ಬ್ಯಾಂಕ್‌ಗಳು ತಮ್ಮ ವಿವಿಧ ಶಾಖೆಗಳನ್ನು ಕೆಲಸದ ಅವಧಿಯಲ್ಲಿ ತೆರೆದಿರುವಂತೆ ಸೂಚನೆ ನೀಡಿದೆ. ಮಾ.31ಕ್ಕೆ 2022-2023ರ ಹಣಕಾಸು ವರ್ಷ ಕೊನೆಯಾಗಿವುದರಿಂದ, ಖಾತೆಗಳ ವಾರ್ಷಿಕ ಮುಕ್ತಾಯಕ್ಕಾಗಿ ಮಾರ್ಚ್ 31ರವರೆಗೆ ಬ್ಯಾಂಕ್ ತೆರೆದಿರುವಂತೆ ತಿಳಿಸಲಾಗಿದೆ.
ಈ ಸಂಬಂಧ ಮಂಗಳವಾರ ಎಲ್ಲಾ ಏಜೆನ್ಸಿ ಬ್ಯಾಂಕ್‌ಗಳಿಗೆ ಪತ್ರ ಬರೆದಿರುವ ಆರ್‌ಬಿಐ, 2022-23ಕ್ಕೆ ಏಜೆನ್ಸಿ ಬ್ಯಾಂಕ್‌ಗಳು ಮಾಡಿರುವ ಎಲ್ಲಾ ಸರ್ಕಾರಿ ವಹಿವಾಟುಗಳನ್ನು ಇದೇ ಹಣಕಾಸು ವರ್ಷದೊಳಗೆ ಲೆಕ್ಕ ಹಾಕಬೇಕು ಎಂದು ಸೂಚಿಸಿದೆ.
''ಎಲ್ಲಾ ಬ್ಯಾಂಕುಗಳು 2023ರ ಮಾರ್ಚ್ 31ರಂದು ಸಾಮಾನ್ಯ ಕೆಲಸದ ಸಮಯದವರೆಗೆ ಸರ್ಕಾರಿ ವಹಿವಾಟುಗಳಿಗೆ ಗೊತ್ತುಪಡಿಸಿದ ಹಣಕಾಸು ವ್ಯವಹಾರದ ಶಾಖೆಗಳನ್ನು ತೆರೆದಿರಬೇಕು" ಎಂದು ಆರ್‌ಬಿಐ ತನ್ನ ಪತ್ರದಲ್ಲಿ ತಿಳಿಸಿದೆ. ಅಲ್ಲದೇ ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್‌ಗಳ ವರ್ಗಾವಣೆ (NEFT) ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ (RTGS) ಮೂಲಕ ವಹಿವಾಟು ನಡೆಸಲು ಮಾರ್ಚ್ 31 ಮಧ್ಯರಾತ್ರಿ 12 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ. ಮಾರ್ಚ್ 31 ರಂದು ಸರ್ಕಾರಿ ಚೆಕ್‌ಗಳ ಸಂಗ್ರಹಕ್ಕಾಗಿ ವಿಶೇಷ ಕ್ಲಿಯರಿಂಗ್ ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಆರ್‌ಬಿಐನ ಪಾವತಿ ಮತ್ತು ಸೆಟಲ್‌ಮೆಂಟ್ ಸಿಸ್ಟಮ್ಸ್ (ಡಿಪಿಎಸ್‌ಎಸ್) ಇಲಾಖೆ ಅಗತ್ಯ ಸೂಚನೆಗಳನ್ನು ನೀಡುತ್ತದೆ ಎಂದು ಅದು ಹೇಳಿದೆ.
ಇನ್ನು, GST ಅಥವಾ TIN2.0 ಇ-ರಶೀದಿಗಳ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು ಸೇರಿದಂತೆ ವಿವಿಧ ವಹಿವಾಟುಗಳ ವರದಿಗೆ ಸಂಬಂಧಿಸಿದಂತೆ, ಮಾರ್ಚ್ 31ರ ವರದಿಯನ್ನು ಏಪ್ರಿಲ್ 1 ರ ಮಧ್ಯಾಹ್ನ 12 ಗಂಟೆವರೆಗೆ ವರದಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಆರ್‌ಬಿಐ ಎಲ್ಲಾ ಬ್ಯಾಂಕುಗಳಿಗೆ ತಿಳಿಸಿದೆ.
ಇದನ್ನೂ ಓದಿ :ಮತ್ತೆ 9,000 ಜಾಬ್ ಕಟ್: ಉದ್ಯೋಗಿಗಳಿಗೆ ಶಾಕ್ ಕೊಟ್ಟ ಅಮೆಜಾನ್