ನವದೆಹಲಿ:ಮಹತ್ವದ ಹೆಜ್ಜೆಯೊಂದರಲ್ಲಿ ಕೇಂದ್ರ ಸರ್ಕಾರವು ಈರುಳ್ಳಿ ಬಫರ್ ಸ್ಟಾಕ್ ಮಿತಿಯನ್ನು 3 ಲಕ್ಷ ಮೆಟ್ರಿಕ್ ಟನ್ಗಳಿಂದ 5 ಲಕ್ಷ ಮೆಟ್ರಿಕ್ ಟನ್ಗಳಿಗೆ ಹೆಚ್ಚಿಸಿದೆ. ಈಗಾಗಲೇ ಕೇಂದ್ರ ಸರ್ಕಾರ 3 ಲಕ್ಷ ಮೆಟ್ರಿಕ್ ಟನ್ ಈರುಳ್ಳಿಯನ್ನು ಬಫರ್ ಸ್ಟಾಕ್ನಲ್ಲಿ ಇಟ್ಟುಕೊಂಡಿದ್ದು, ಈಗ ಹೆಚ್ಚುವರಿಯಾಗಿ ಇನ್ನೂ 2 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ದಾಸ್ತಾನಿಗೆ ಮುಂದಾಗಿದೆ.
ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡುವುದರ ಹೊರತಾಗಿ, ಬಫರ್ ಸ್ಟಾಕ್ನಿಂದ ಈರುಳ್ಳಿಯನ್ನು ಸೋಮವಾರದಿಂದ ದೆಹಲಿಯಲ್ಲಿ (ಆಗಸ್ಟ್ 21) ಚಿಲ್ಲರೆ ಮಳಿಗೆಗಳು ಮತ್ತು ಎನ್ಸಿಸಿಎಫ್ ನ ಮೊಬೈಲ್ ವ್ಯಾನ್ಗಳ ಮೂಲಕ ಚಿಲ್ಲರೆ ಗ್ರಾಹಕರಿಗೆ ಪ್ರತಿ ಕೆ.ಜಿ.ಗೆ 25 ರೂ.ಗಳ ಸಬ್ಸಿಡಿ ದರದಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಇತರ ಏಜೆನ್ಸಿಗಳು ಮತ್ತು ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳನ್ನು ಬಳಸಿಕೊಂಡು ಮುಂಬರುವ ದಿನಗಳಲ್ಲಿ ಈರುಳ್ಳಿಯ ಚಿಲ್ಲರೆ ಮಾರಾಟವನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸಲಾಗುವುದು.
ಈಗಾಗಲೇ ಪ್ರಮುಖ ದಾಸ್ತಾನು ಕೇಂದ್ರಗಳಲ್ಲಿ ಸಂಗ್ರಹಿಸಿದ ದಾಸ್ತಾನುಗಳನ್ನು ಅಗತ್ಯಕ್ಕೆ ತಕ್ಕಂತೆ ವಿಲೇವಾರಿ ಮಾಡುವುದರ ಜೊತೆಗೆ ಹೆಚ್ಚುವರಿ ಖರೀದಿ ಗುರಿಯನ್ನು ಸಾಧಿಸಲು ತಲಾ 1 ಲಕ್ಷ ಟನ್ ಈರುಳ್ಳಿ ಸಂಗ್ರಹಿಸುವಂತೆ ಎನ್ಸಿಸಿಎಫ್ ಮತ್ತು ನಾಫೆಡ್ಗೆ ಗ್ರಾಹಕ ವ್ಯವಹಾರಗಳ ಇಲಾಖೆ ನಿರ್ದೇಶನ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಖಿಲ ಭಾರತ ಸರಾಸರಿಗಿಂತ ಚಿಲ್ಲರೆ ಬೆಲೆ ಹೆಚ್ಚಾಗಿರುವ ಅಥವಾ ಹಿಂದಿನ ತಿಂಗಳಿಗಿಂತ ಗಮನಾರ್ಹವಾಗಿ ಹೆಚ್ಚಿರುವ ರಾಜ್ಯಗಳ ಪ್ರಮುಖ ಮಾರುಕಟ್ಟೆಗಳಿಗೆ ಬಫರ್ ಸ್ಟಾಕ್ನಿಂದ ಈರುಳ್ಳಿ ವಿಲೇವಾರಿ ಪ್ರಾರಂಭವಾಗಿದೆ. ಇಲ್ಲಿಯವರೆಗೆ ಬಫರ್ನಿಂದ ಸುಮಾರು 1,400 ಮೆಟ್ರಿಕ್ ಟನ್ ಈರುಳ್ಳಿಯನ್ನು ಉದ್ದೇಶಿತ ಮಾರುಕಟ್ಟೆಗಳಿಗೆ ರವಾನಿಸಲಾಗಿದೆ ಮತ್ತು ಲಭ್ಯತೆಯನ್ನು ಹೆಚ್ಚಿಸಲು ನಿರಂತರವಾಗಿ ಬಿಡುಗಡೆ ಮಾಡಲಾಗುತ್ತಿದೆ.