ನವದೆಹಲಿ :ದೇಶದ ಪ್ರಮುಖ ತಿಂಡಿ ತಿನಿಸುಗಳ ತಯಾರಕ ಕಂಪನಿ ಹಲ್ದಿರಾಮ್ ಸ್ವಾಧೀನಪಡಿಸಿಕೊಳ್ಳುವ ಯಾವುದೇ ಮಾತುಕತೆಗಳನ್ನು ನಡೆಸುತ್ತಿಲ್ಲ ಎಂದು ಟಾಟಾ ಕನ್ಸೂಮರ್ ಸ್ಪಷ್ಟಪಡಿಸಿದೆ. ಮಾಧ್ಯಮ ವರದಿಗಳಲ್ಲಿ ವರದಿಯಾದಂತೆ ಹಲ್ದಿರಾಮ್ ಕುಟುಂಬದೊಂದಿಗೆ ಮಾತುಕತೆ ನಡೆಸುತ್ತಿಲ್ಲ ಎಂದು ಟಾಟಾ ಕನ್ಸ್ಯೂಮರ್ ಹೇಳಿದೆ.
"ಸೆಬಿ (ಎಲ್ಒಡಿಆರ್) ನಿಯಮಗಳು, 2015 ರ ನಿಯಮ 30 ರ ಅಡಿ ಬಹಿರಂಗಪಡಿಸುವ ಅಗತ್ಯವಿರುವ ಯಾವುದೇ ಮಾಹಿತಿಯನ್ನು ವಿನಿಮಯ ಕೇಂದ್ರಗಳಿಗೆ ಘೋಷಿಸದ ಯಾವುದೇ ವಿಷಯದ ಬಗ್ಗೆ ನಮಗೆ ತಿಳಿದಿಲ್ಲ" ಎಂದು ಟಾಟಾ ಕನ್ಸ್ಯೂಮರ್ ಹೇಳಿದೆ. "ತನ್ನ ವ್ಯವಹಾರ ಬೆಳವಣಿಗೆ ಮತ್ತು ವಿಸ್ತರಣೆಗಾಗಿ ಕಂಪನಿಯು ವಿವಿಧ ಕಾರ್ಯತಂತ್ರದ ಅವಕಾಶಗಳನ್ನು ನಿರಂತರವಾಗಿ ಮೌಲ್ಯಮಾಪನ ಮಾಡುತ್ತದೆ ಎಂದು ನಾವು ತಿಳಿಸಲು ಬಯಸುತ್ತೇವೆ. ಸೆಬಿ (ಎಲ್ಒಡಿಆರ್) ನಿಯಮಗಳು, 2015 ರ ಅಡಿಯಲ್ಲಿನ ಬಾಧ್ಯತೆಗಳಿಗೆ ಅನುಸಾರವಾಗಿ ಅಂತಹ ಯಾವುದೇ ಅಗತ್ಯವಿದ್ದಾಗ ಕಂಪನಿಯು ಸೂಕ್ತ ಪ್ರಕಟಣೆಗಳನ್ನು ನೀಡುತ್ತದೆ" ಎಂದು ಅದು ಹೇಳಿದೆ.
ಟಾಟಾ ಕನ್ಸ್ಯೂಮರ್ ಷೇರು ಬೆಲೆ ಇಂದು ಬಿಎಸ್ಇಯಲ್ಲಿ ಶೇಕಡಾ 4 ರಷ್ಟು ಏರಿಕೆಯಾಗಿ 879 ರೂ.ಗೆ ತಲುಪಿದೆ. ಟಾಟಾ ಗ್ರೂಪ್ನ ಗ್ರಾಹಕ ಘಟಕವಾದ ಟಾಟಾ ಕನ್ಸೂಮರ್ ಜನಪ್ರಿಯ ಭಾರತೀಯ ತಿಂಡಿ ತಿನಿಸುಗಳ ತಯಾರಕ ಕಂಪನಿ ಹಲ್ದಿರಾಮ್ನಲ್ಲಿ ಕನಿಷ್ಠ ಶೇಕಡಾ 51 ರಷ್ಟು ಪಾಲು ಖರೀದಿಸಲು ಮಾತುಕತೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಭಾರತದಲ್ಲಿ ಮನೆಮಾತಾಗಿರುವ ಹಲ್ದಿರಾಮ್ ಬೈನ್ ಕ್ಯಾಪಿಟಲ್ ಸೇರಿದಂತೆ ಖಾಸಗಿ ಈಕ್ವಿಟಿ ಸಂಸ್ಥೆಗಳೊಂದಿಗೆ ಶೇಕಡಾ 10 ರಷ್ಟು ಪಾಲು ಮಾರಾಟ ಮಾಡುವ ಬಗ್ಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ.