ಮುಂಬೈ :ಬಿಎಸ್‌ಇ ಸೆನ್ಸೆಕ್ಸ್ ಹಿಂದಿನ ದಿನದ ಮುಕ್ತಾಯ 67,097.44ಕ್ಕೆ ಹೋಲಿಸಿದರೆ ಗುರುವಾರ 23 ಪಾಯಿಂಟ್‌ಗಳ ಇಳಿಕೆಯೊಂದಿಗೆ 67,074.34 ನಲ್ಲಿ ಪ್ರಾರಂಭವಾಯಿತು. ಆದಾಗ್ಯೂ, ವಹಿವಾಟಿನ ಅಂತಿಮ ಗಂಟೆಯಲ್ಲಿ ಸೂಚ್ಯಂಕವು ಉತ್ತಮ ಖರೀದಿಗೆ ಸಾಕ್ಷಿಯಾಯಿತು. ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ ತನ್ನ ಹೊಸ ದಾಖಲೆಯ ಗರಿಷ್ಠ 67,619.17 ಅನ್ನು ತಲುಪಿತು ಮತ್ತು ನಿಫ್ಟಿ ಕೂಡ ತನ್ನ ಹೊಸ ದಾಖಲೆಯ ಗರಿಷ್ಠ 19,991.85 ಮಟ್ಟವನ್ನು ಮುಟ್ಟಿತು.
ಸೆನ್ಸೆಕ್ಸ್ ಅಂತಿಮವಾಗಿ 474 ಪಾಯಿಂಟ್ ಅಥವಾ ಶೇಕಡಾ 0.71 ರಷ್ಟು ಏರಿಕೆಯಾಗಿ 67,571.90 ಕ್ಕೆ ಕೊನೆಗೊಂಡರೆ, ನಿಫ್ಟಿ 146 ಪಾಯಿಂಟ್ ಅಥವಾ 0.74 ರಷ್ಟು ಏರಿಕೆಯಾಗಿ 19,979.15 ಕ್ಕೆ ದಿನವನ್ನು ಮುಕ್ತಾಯಗೊಳಿಸಿತು. ಇದು ಎರಡೂ ಸೂಚ್ಯಂಕಗಳ ಗರಿಷ್ಠ ಮುಕ್ತಾಯದ ಮಟ್ಟವಾಗಿದೆ. ಐಸಿಐಸಿಐ ಬ್ಯಾಂಕ್ ಮತ್ತು ಐಟಿಸಿ ಸೆನ್ಸೆಕ್ಸ್ ಏರಿಕೆಗೆ ಹೆಚ್ಚಿನ ಕೊಡುಗೆ ನೀಡಿದವು. ಮತ್ತೊಂದೆಡೆ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇನ್ಫೋಸಿಸ್ ಅತಿ ಹೆಚ್ಚು ಕುಸಿತ ಕಂಡವು.
ವಹಿವಾಟಿನಲ್ಲಿ ಬಿಎಸ್‌ಇ ಮಿಡ್‌ಕ್ಯಾಪ್ ತನ್ನ ಹೊಸ ದಾಖಲೆಯ ಗರಿಷ್ಠವಾದ 29,671.6 ಮಟ್ಟ ತಲುಪಿತು. ಆದರೆ, ಕೊನೆಗೆ ಒಂದಿಷ್ಟು ಇಳಿಕೆಯಾಯಿತು. ದಿನದ ವಹಿವಾಟಿನ ಅಂತ್ಯದಲ್ಲಿ ಮಿಡ್‌ಕ್ಯಾಪ್ 0.05 ರಷ್ಟು ಏರಿಕೆಯಾಗಿ 29,623.67 ಕ್ಕೆ ಕೊನೆಗೊಂಡಿತು. ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕವು ತನ್ನ ಹೊಸ ದಾಖಲೆಯ ಗರಿಷ್ಠವಾದ 34,193.74 ಅನ್ನು ವಹಿವಾಟಿನ ಅವಧಿಯಲ್ಲಿ ಮುಟ್ಟಿತ್ತು. ಕೊನೆಗೆ 0.19 ರಷ್ಟು ಹೆಚ್ಚಾಗಿ 34,101.53 ಕ್ಕೆ ಕೊನೆಗೊಂಡಿತು.