ಕರ್ನಾಟಕ

karnataka

ETV Bharat / business

ತನ್ನದೇ ನಿರ್ದೇಶಕರ ಕಂಪನಿಗಳಿಗೆ ಸಾಲ; ಐಸಿಐಸಿಐ ಬ್ಯಾಂಕ್​ಗೆ ₹12 ಕೋಟಿ ದಂಡ ವಿಧಿಸಿದ ಆರ್​ಬಿಐ

ಸಾಲ ನೀಡುವಿಕೆಯಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಆರ್​ಬಿಐ ಐಸಿಐಸಿಐ ಬ್ಯಾಂಕ್​ಗೆ 12 ಕೋಟಿ ರೂ. ದಂಡ ವಿಧಿಸಿದೆ.

RBI Slaps Rs12.19 Crore Penalty on ICICI Bank
RBI Slaps Rs12.19 Crore Penalty on ICICI Bank

By ETV Bharat Karnataka Team

Published : Oct 17, 2023, 7:35 PM IST

ನವದೆಹಲಿ: ಐಸಿಐಸಿಐ ಬ್ಯಾಂಕ್ ಲಿಮಿಟೆಡ್​ನಲ್ಲಿ ನಿರ್ದೇಶಕರಾಗಿರುವ ಇಬ್ಬರು ವ್ಯಕ್ತಿಗಳು ತಾವೇ ನಿರ್ದೇಶಕರಾಗಿರುವ ಮತ್ತೊಂದು ಕಂಪನಿಗಳಿಗೆ ಸಾಲ ಮಂಜೂರು ಮಾಡಿದ್ದಕ್ಕಾಗಿ ಅಥವಾ ಸಾಲ ಮಂಜೂರಿಗೆ ಯತ್ನಿಸಿದ್ದಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಐಸಿಐಸಿಐ ಬ್ಯಾಂಕ್​ಗೆ 12.19 ಕೋಟಿ ರೂ.ಗಳ ದಂಡ ವಿಧಿಸಿದೆ.

ಮಾರ್ಚ್ 31, 2020 ಮತ್ತು ಮಾರ್ಚ್ 31, 2021 ಅವಧಿಯಲ್ಲಿನ ಬ್ಯಾಂಕಿನ ಆರ್ಥಿಕ ಸ್ಥಿತಿಗೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕಿನ ಮೇಲ್ವಿಚಾರಣೆ ಮೌಲ್ಯಮಾಪನಕ್ಕಾಗಿ (ಐಎಸ್ಇ) ಆರ್​ಬಿಐ ಶಾಸನಬದ್ಧ ತಪಾಸಣೆ ನಡೆಸಿತ್ತು. ಐಎಸ್ಇ 2020 ಮತ್ತು ಐಎಸ್ಇ 2021 ರ ಬಗ್ಗೆ ಅಪಾಯ ಮೌಲ್ಯಮಾಪನ ವರದಿಗಳು (ಆರ್​ಎಆರ್) ಮತ್ತು ಪರಿಶೀಲನಾ ವರದಿಗಳು (ಐಆರ್) ಮತ್ತು ಆ ನಿಟ್ಟಿನಲ್ಲಿ ಎಲ್ಲಾ ಸಂಬಂಧಿತ ವ್ಯವಹಾರಗಳನ್ನು ಪರಿಶೀಲಿಸಿದಾಗ, ಬ್ಯಾಂಕ್ ತನ್ನ ಇಬ್ಬರು ನಿರ್ದೇಶಕರು ನಿರ್ದೇಶಕರಾಗಿದ್ದ ಕಂಪನಿಗಳಿಗೆ ಸಾಲ ಮಂಜೂರು ಮಾಡಿದೆ ಅಥವಾ ಸಾಲ ನೀಡುವ ಬದ್ಧತೆ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.

ಬ್ಯಾಂಕಿಂಗ್ ನಿಯಂತ್ರಣ (ಬಿಆರ್) ಕಾಯ್ದೆಯ ನಿಬಂಧನೆಗಳು ಮತ್ತು ಬ್ಯಾಂಕಿಂಗ್ ನಿಯಂತ್ರಕ ಹೊರಡಿಸಿದ ನಿರ್ದೇಶನಗಳನ್ನು ಅನುಸರಿಸಲು ವಿಫಲವಾದ ಕಾರಣ ಐಸಿಐಸಿಐ ಬ್ಯಾಂಕ್​ಗೆ ಏಕೆ ದಂಡ ವಿಧಿಸಬಾರದು ಎಂದು ಆರ್​ಬಿಐ ನೋಟಿಸ್ ನೀಡಿದೆ. ನೋಟಿಸ್​ಗೆ ಬ್ಯಾಂಕ್​ ನೀಡಿದ ಉತ್ತರ, ವೈಯಕ್ತಿಕ ವಿಚಾರಣೆಯ ಸಮಯದಲ್ಲಿ ಮಾಡಿದ ಮೌಖಿಕ ಹೇಳಿಕೆಗಳು ಮತ್ತು ಹೆಚ್ಚುವರಿ ಹೇಳಿಕೆಗಳನ್ನು ಪರಿಗಣಿಸಿದ ನಂತರ, ಆರ್​ಬಿಐ ಬಿಆರ್ ಕಾಯ್ದೆಯ ನಿಬಂಧನೆಗಳು ಮತ್ತು ಆರ್​ಬಿಐನ ನಿರ್ದೇಶನಗಳನ್ನು ಬ್ಯಾಂಕ್ ಅನುಸರಿಸುತ್ತಿಲ್ಲ ಎಂಬ ಆರೋಪ ದೃಢಪಟ್ಟಿದೆ ಮತ್ತು ಬ್ಯಾಂಕಿನ ಮೇಲೆ ವಿತ್ತೀಯ ದಂಡ ವಿಧಿಸುವ ಅಗತ್ಯವಿದೆ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಅದು ಹೇಳಿದೆ.

ಆರ್​ಬಿಐ ಪ್ರಕಾರ, ಐಸಿಐಸಿಐ ಬ್ಯಾಂಕ್ ವಿರುದ್ಧದ ಕ್ರಮವು ನಿಯಂತ್ರಕ ಅನುಸರಣೆಯಲ್ಲಿನ ನ್ಯೂನತೆಗಳನ್ನು ಆಧರಿಸಿದೆ ಮತ್ತು ಬ್ಯಾಂಕ್ ತನ್ನ ಗ್ರಾಹಕರೊಂದಿಗೆ ಮಾಡಿಕೊಂಡ ಯಾವುದೇ ವಹಿವಾಟು ಅಥವಾ ಒಪ್ಪಂದದ ಸಿಂಧುತ್ವವನ್ನು ಪ್ರಶ್ನಿಸುವ ಉದ್ದೇಶ ಹೊಂದಿಲ್ಲ.

ಆರ್​ಬಿಐ ಐಸಿಐಸಿಐ ಬ್ಯಾಂಕ್​ಗೆ ವಿತ್ತೀಯ ದಂಡ ವಿಧಿಸುತ್ತಿರುವುದು ಇದೇ ಮೊದಲಲ್ಲ. ಮೇ 2021 ರಲ್ಲಿ ಆರ್​ಬಿಐ ತನ್ನ ಹೂಡಿಕೆ ಪೋರ್ಟ್​ಫೋಲಿಯೊದ ಕಾರ್ಯಾಚರಣೆಯಲ್ಲಿ ವಿವೇಚನಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಐಸಿಐಸಿಐ ಬ್ಯಾಂಕ್​ಗೆ 3 ಕೋಟಿ ರೂ.ಗಳ ದಂಡ ವಿಧಿಸಿತ್ತು. ಸೆಕ್ಯುರಿಟಿಗಳನ್ನು ಒಂದು ವರ್ಗದಿಂದ ಮತ್ತೊಂದು ವರ್ಗಕ್ಕೆ ವರ್ಗಾಯಿಸುವ ವಿಷಯದಲ್ಲಿ ನಿಯಮಗಳ ಉಲ್ಲಂಘನೆ ನಡೆದಿದೆ ಎಂದು ಆಗ ಆರ್​ಬಿಐ ಹೇಳಿತ್ತು.

ಇದನ್ನೂ ಓದಿ: ಡೆಲಿವರಿ ಬಾಯ್​ಗಳಿಗೂ ಕನಿಷ್ಠ ವೇತನ ಕಾನೂನು ತರಲಿದೆ ಈ ಸರ್ಕಾರ

ABOUT THE AUTHOR

...view details