ಹೈದರಾಬಾದ್( ತೆಲಂಗಾಣ): ಗೂಗಲ್ನಲ್ಲಿ ಒಳ್ಳೆಯ ಉದ್ಯೋಗ! ವರ್ಷಕ್ಕೆ 60 ಲಕ್ಷ ರೂಪಾಯಿಗಳ ಬೃಹತ್ ಪ್ಯಾಕೇಜ್! ಹೌದು.. ಗುಂಟೂರಿನ ಹುಡುಗಿ ರಾವೂರಿ ಪೂಜಿತಾ ತನ್ನ ಯೌವನದ ಕನಸನ್ನು ಹೀಗೆ ನನಸಾಗಿಸಿಕೊಂಡಿದ್ದಾರೆ. ಅವರ ಯಶಸ್ಸಿನ ಗುಟ್ಟೇನು? ಲಾಕ್ಡೌನ್ಗೂ ಯುವತಿಯ ಯಶಸ್ಸಿಗೂ ಏನೋ ಸಂಬಂಧವಿದೆ. ಆದರೆ ಅದೇನೆಂದು ಆಶ್ಚರ್ಯಪಡುತ್ತೀರಾ? ಅವರ ಮಾತಿನಲ್ಲೇ ಅದೆಲ್ಲವನ್ನೂ ತಿಳಿಯೋಣ ಬನ್ನಿ.
’’ನಾನು ಬಿಟೆಕ್ನ ಮೊದಲ ವರ್ಷದಲ್ಲಿದ್ದಾಗ ಕೋವಿಡ್-19 ಸೋಂಕು ಪ್ರಾರಂಭವಾಯಿತು. ಆಗಲೇ ಲಾಕ್ಡೌನ್ ಕೂಡ ಹೇರಲಾಗಿತ್ತು. ಎಷ್ಟೋ ಜನರಂತೆ ನನಗೂ ಕಾಲೇಜಿಗೆ ಹೋಗಿ ಓದುವ ಅವಕಾಶವಿರಲಿಲ್ಲ. ಆದರೆ ಈ ಬಗ್ಗೆ ನಾನು ತೀರಾ ತಲೆಕೆಡಿಸಿಕೊಳ್ಳಲಿಲ್ಲ. ಆನ್ಲೈನ್ನಲ್ಲಿ ಕಾಲೇಜು ಸಿಬ್ಬಂದಿ ನೀಡುವ ಉಪನ್ಯಾಸಗಳನ್ನು ನಾನು ಗಮನವಿಟ್ಟು ಕೇಳುತ್ತಿದ್ದೆ. ನನ್ನ ಸಂದೇಹಗಳನ್ನು ಮತ್ತು ಸಮಸ್ಯೆಗಳನ್ನು ಸಾಧ್ಯವಾದಷ್ಟು ಶಿಕ್ಷಕರು ಮತ್ತು ಹಿರಿಯರಿಗೆ ಕೇಳಿ ಉತ್ತರ ಪಡೆದುಕೊಳ್ಳುತ್ತಿದ್ದೆ. ಅವರಲ್ಲಿ ಕೇಳಲು ಸಾಧ್ಯವಾಗದಿದ್ದಾಗ ಆನ್ಲೈನ್ನಲ್ಲಿ ಉತ್ತರ ಹುಡುಕಿಕೊಳ್ಳುತ್ತಿದ್ದೆ. ನನ್ನ ತಂದೆ ಖಾಸಗಿ ಬ್ಯಾಂಕ್ನಲ್ಲಿ ಅಧಿಕಾರಿ. ನನ್ನ ತಂಗಿ ಏಳನೇ ತರಗತಿ ಓದುತ್ತಿದ್ದಾಳೆ. ನಾನು ಏನು ಓದಬೇಕು ಹೇಗೆ ಓದಬೇಕು ಎಂದು ಮಾರ್ಗದರ್ಶನ ನೀಡುವವರು ಯಾರೂ ಇಲ್ಲ. ಹಾಗಾಗಿ ನಾನೇ ಅದನ್ನು ತಿಳಿಯಲು ಪ್ರಯತ್ನಿಸುತ್ತಿದ್ದೆ ಆ ಮೂಲಕ ಯಶಸ್ಸು ಪಡೆದೆ‘‘ ಎನ್ನುತ್ತಾಳೆ ಪೂಜಿತಾ
ಜೆಇಇ ಪಾಸಾಗಿ ಸೀಟ್ ಗಿಟ್ಟಿಸಿಕೊಂಡಿದ್ದೆ ಆದರೆ..?:ಹೀಗೆ ಕಷ್ಟಪಟ್ಟು ಓದಿ ಜೆಇಇಯಲ್ಲಿ ಪಾಸಾದೆ ಆ ಮೂಲಕ ನನಗೆ ಜಾರ್ಖಂಡ್ ಬಿಟ್ಸ್ನಲ್ಲಿ ಸೀಟು ಸಿಕ್ಕಿತು. ಆದರೆ ನನ್ನನ್ನು ಅಷ್ಟು ದೂರ ಕಳಿಸಲು ಪೋಷಕರು ಒಪ್ಪಲಿಲ್ಲ. ಹೀಗಾಗಿ ಗುಂಟೂರಿನ ಕೆಎಲ್ ವಿಶ್ವವಿದ್ಯಾನಿಲಯದಲ್ಲಿ ಬಿ.ಟೆಕ್ ಸೇರಿಕೊಂಡೆ. ನಾನು ಮೊದಲ ವರ್ಷದ ಮೊದಲ ಸೆಮಿಸ್ಟರ್ನಲ್ಲಿದ್ದಾಗ, ಕೆಎಲ್ ವಿಶ್ವವಿದ್ಯಾಲಯವು ಸಮಸ್ಯೆ ಪರಿಹರಿಸುವ ಕೋರ್ಸ್ ಒಂದನ್ನು ಆರಂಭಿಸಿತು. ಹೀಗೆ ನನ್ನ ಕೋಡಿಂಗ್ ಪಯಣ ಶುರುವಾಯಿತು. ಎರಡನೇ ಸೆಮಿಸ್ಟರ್ನ ಕೊನೆಯಲ್ಲಿ ಲಾಕ್ಡೌನ್ ಹೇರಲಾಯಿತು. ನನಗೆ ಆನ್ಲೈನ್ ತರಗತಿಗಳು ಅರ್ಥವಾಗದಿದ್ದರೆ, ಯೂಟ್ಯೂಬ್ ವೀಡಿಯೊಗಳನ್ನು ವೀಕ್ಷಿಸುತ್ತಿದ್ದೆ ಮತ್ತು ಕೋಡಿಂಗ್ ಅನ್ನು ಕರಗತ ಮಾಡಿಕೊಳ್ಳಲು ಪ್ರಾರಂಭಿಸಿದೆ ಅಂತಾರೆ ರಾವೂರಿ ಪೂಜಿತಾ.