ಬೀಜಿಂಗ್(ಚೀನಾ): ಭಾರತವು 2022 ರ ಮೊದಲ ಒಂಬತ್ತು ತಿಂಗಳಲ್ಲಿ ಚೀನಾದಿಂದ 89.66 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಇದು ಯಾವುದೇ ವರ್ಷದ ಮೂರು ತ್ರೈಮಾಸಿಕಗಳಲ್ಲಿ ಅತ್ಯಧಿಕ ವಹಿವಾಟಾಗಿದೆ ಎಂದು ವರದಿಗಳು ಹೇಳಿವೆ.
ಭಾರತ ಮತ್ತು ಚೀನಾ ನಡುವಿನ ದ್ವಿಮುಖ ವ್ಯಾಪಾರ 100 ಬಿಲಿಯನ್ ಡಾಲರ್ ದಾಟಿದೆ. ಜನವರಿ 1, 2022 ಮತ್ತು ಸೆಪ್ಟೆಂಬರ್ 30, 2022 ರ ನಡುವಿನ ಒಂಬತ್ತು ತಿಂಗಳಲ್ಲಿ ಚೀನಾದಿಂದ ಭಾರತದ ಆಮದು ಶೇ 31ರಷ್ಟು ಹೆಚ್ಚಳ ದಾಖಲಿಸಿದೆ. ಭಾರತ ಮತ್ತು ಚೀನಾ ನಡುವಿನ ದ್ವಿಮುಖ ವ್ಯಾಪಾರವು 100 ಬಿಲಿಯನ್ ಡಾಲರ್ ದಾಟಿದೆ. ಆದರೆ ಅದೇ ಸಮಯದಲ್ಲಿ ಭಾರತದ ವ್ಯಾಪಾರ ಕೊರತೆಯು ದಾಖಲೆಯ ಮಟ್ಟಕ್ಕೆ ತಲುಪಿದೆ.
2021 ರ ಮೂರನೇ ತ್ರೈಮಾಸಿಕದ ಕೊನೆಯಲ್ಲಿ ಆಮದು ಪ್ರಮಾಣ 68.46 ಬಿಲಿಯನ್ ಡಾಲರ್ ಆಗಿತ್ತು. ಅದು ಈ ಬಾರಿ 89 ಬಿಲಿಯನ್ ಡಾಲರ್ಗೆ ತಲುಪುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದೆ. ಚೀನಾದ ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಕಸ್ಟಮ್ಸ್ (GAC) ದ ಮಾಹಿತಿ ಪ್ರಕಾರ ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಚೀನಾಕ್ಕೆ ಭಾರತದ ರಫ್ತು ಪ್ರಮಾಣ ಶೇ 36.4 ರಷ್ಟು ಕುಸಿದು ಕೇವಲ 13.97 ಶತಕೋಟಿ ಡಾಲರ್ಗೆ ತಲುಪಿದೆ ಎಂದು ತೋರಿಸುತ್ತದೆ. ಈ ಅವಧಿಯಲ್ಲಿ ವ್ಯಾಪಾರ ಕೊರತೆಯು 75.69 ಶತಕೋಟಿಗೆ ವಿಸ್ತರಣೆ ಕಂಡಿದೆ. ಇದು ಕಳವಳಕಾರಿ ಅಂಶವಾಗಿದೆ.
ದ್ವಿಪಕ್ಷೀಯ ವ್ಯಾಪಾರವು ಕಳೆದ ವರ್ಷದ ದಾಖಲೆಯ ಅಂಕಿ - ಅಂಶ ಮತ್ತು ವ್ಯಾಪಾರ ಕೊರತೆ ಮೀರಿಸುವ ಹಾದಿಯಲ್ಲಿದೆ. 2021 ರಲ್ಲಿ ದ್ವಿಮುಖ ವ್ಯಾಪಾರವು ಮೊದಲ ಬಾರಿಗೆ 100 ಬಿಲಿಯನ್ ಡಾಲರ್ ದಾಟಿ 125.6 ಬಿಲಿಯನ್ ಡಾಲರ್ಗೆ ತಲುಪಿದೆ. ದ್ವಿಮುಖ ವ್ಯಾಪಾರದ ಹೆಚ್ಚಳದ ಅಂಕಿ - ಅಂಶಗಳಲ್ಲಿ, ಚೀನಾದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಸರಕುಗಳು ಪ್ರಮುಖ ಪಾಲನ್ನು ಹೊಂದಿವೆ. ಇದು ಈ ವರ್ಷ ಇಲ್ಲಿಯವರೆಗೆ 97.5 ಶತಕೋಟಿ ಡಾಲರ್ಗಳ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ವರ್ಷದ ಅಂತ್ಯದ ವೇಳೆಗೆ ಇದು 100 ಬಿಲಿಯನ್ ಡಾಲರ್ ದಾಟಲಿದೆ ಎಂದು ತಜ್ಞರು ನಂಬಿದ್ದಾರೆ.