ನವದೆಹಲಿ: 2022-23ರ ಆರ್ಥಿಕ ವರ್ಷದಲ್ಲಿ ದೇಶದ ಒಟ್ಟು ಜಿಡಿಪಿ ಬೆಳವಣಿಗೆಯು ಅಂದಾಜು ಶೇ.7ಕ್ಕಿಂತ ಹೆಚ್ಚಾಗಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆದ ಭಾರತೀಯ ಕೈಗಾರಿಕಾ ಒಕ್ಕೂಟದ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಡಿಪಿ ಶೇ.7ಕ್ಕಿಂತ ಸ್ವಲ್ಪ ಹೆಚ್ಚು ಬಂದರೂ ಆಶ್ಚರ್ಯಪಡಬೇಕಾಗಿಲ್ಲ ಎಂದರು.
ಭಾರತದ ವಿತ್ತೀಯ ನೀತಿ ಮತ್ತು ಅದರ ಭವಿಷ್ಯದ ನಡೆಯ ಬಗ್ಗೆ ಮಾತನಾಡಿರುವ ಆರ್‌ಬಿಐ ಗವರ್ನರ್, ಇದು ನಮ್ಮ ಕೈಯಲ್ಲಿಲ್ಲ. ಇದು ನೆಲ ಮಟ್ಟದ ಮೇಲಿನ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಇಲ್ಲಿ ಏನಾಗುತ್ತಿದೆ ಮತ್ತು ಅದರ ದೃಷ್ಟಿಕೋನ ಮತ್ತು ಪ್ರವೃತ್ತಿಗಳು ಯಾವುವು ಅಥವಾ ಹಣದುಬ್ಬರವು ಹೇಗೆ ಮೃದುವಾಗುತ್ತದೆ ಎಂಬುದರ ಮೂಲಕ ನಾವು ನಡೆಸುತ್ತಿದ್ದೇವೆ ಎಂದು ಹೇಳಿದರು.
ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ 2022-23ರ ಆರ್ಥಿಕ ಸಮೀಕ್ಷೆಯ ವರದಿಯಲ್ಲಿ ದೇಶದ ಜಿಡಿಪಿ ಶೇ.7 ರಷ್ಟು ಬೆಳವಣಿಗೆಯಾಗಬಹುದು ಎಂದು ಮುನ್ಸೂಚನೆ ನೀಡಿದೆ. ಮುಂದಿನ ಹಣಕಾಸು ವರ್ಷ 2023-24ಕ್ಕೆ ಶೇ.6.5 ಮೂಲ ಜಿಡಿಪಿ ಬೆಳವಣಿಗೆಯನ್ನು ಅಂದಾಜು ಮಾಡಲಾಗಿದೆ. ಇನ್ನು, ಆರ್‌ಬಿಐ ಏಪ್ರಿಲ್‌ನಲ್ಲಿ ತನ್ನ ಮೊದಲ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಶೇ.6.5ರ ದರದಲ್ಲಿ ಮುಂದುವರೆಸಲು ನಿರ್ಧರಿಸಿತ್ತು.
ಹಣದುಬ್ಬರದ ವಿರುದ್ಧ ಹೋರಾಟ ಮಾಡುತ್ತಲೇ ಆರ್‌ಬಿಐ ಮೇ 2022ರಿಂದ ರೆಪೋ ದರವನ್ನು 250 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಬಡ್ಡಿದರಗಳನ್ನು ಹೆಚ್ಚಿಸುವುದು ವಿತ್ತೀಯ ನೀತಿ ಸಾಧನವಾಗಿದ್ದು ಅದು ಸಾಮಾನ್ಯವಾಗಿ ಆರ್ಥಿಕತೆಯಲ್ಲಿ ಬೇಡಿಕೆ ನಿಗ್ರಹಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಹಣದುಬ್ಬರ ದರ ಇಳಿಕೆಗೆ ಸಹಾಯ ಮಾಡುತ್ತದೆ. ಈ ಬಗ್ಗೆ ಉಲ್ಲೇಖಿಸಿ ಮಾತನಾಡಿದ ಶಕ್ತಿಕಾಂತ ದಾಸ್, ರೆಪೋ ದರದಲ್ಲಿ ಯಾವುದೇ ಬದಲಾಣೆ ಮಾಡದೇ ಇರುವ ಇತ್ತೀಚಿನ ನಿರ್ಧಾರವನ್ನು ಒಂದು ವಿತ್ತೀಯ ನೀತಿ ವಿರಾಮವಾಗಿ ನೋಡಬೇಕೇ ಹೊರತು ಅದನ್ನು ಕೇಂದ್ರವಾಗಿರಿಸಿಕೊಳ್ಳಬಾರದು ಎಂದರು.
ಏಪ್ರಿಲ್‌ನಲ್ಲಿ ರೆಪೋ ದರ ಕುರಿತ ಮಾತನಾಡಿದ್ದ ಆರ್‌ಬಿಐ ಗವರ್ನರ್, ಪ್ರಸ್ತುತ ರೆಪೋದರ ಈ ಹಿಂದಿನ ಶೇ 6.5 ದರದಲ್ಲೇ ಮುಂದುವರಿಯಲಿದೆ. ಭವಿಷ್ಯದಲ್ಲಿ ಅಗತ್ಯ ಬಿದ್ದರೆ ಇದನ್ನು ಮರುಪರಿಶೀಲಿಸಲು ಸಿದ್ಧವಾಗಿರುವುದಾಗಿ ತಿಳಿಸಿದ್ದರು. ಮೂರು ದಿನಗಳ ಕಾಲ ನಡೆದ ಹಣಕಾಸು ನೀತಿ ಸಭೆಯ ನಂತರ ಇದನ್ನು ಅವರು ಪ್ರಕಟಿಸಿದ್ದರು.
ಅಭಿವೃದ್ಧಿಯ ಬಗ್ಗೆ ಗುರಿಯನ್ನು ಕೇಂದ್ರೀಕೃತವಾಗಿಟ್ಟುಕೊಂಡು, ಹಣದುಬ್ಬರವು ಗುರಿಯೊಂದಿಗೆ ಸಮನ್ವಯತೆ ಸಾಧಿಸುವುದನ್ನು ಖಾತ್ರಿಪಡಿಸಿಕೊಳ್ಳಲು ಎಂಪಿಸಿಯ ಆರು ಸದಸ್ಯರ ಪೈಕಿ ಐವರು ರೆಪೋ ದರ ಹೆಚ್ಚಿಸದಿರಲು ಮತ ಹಾಕಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದರು. ಈ ಹಿಂದೆ ಆರು ಬಾರಿ ಸತತವಾಗಿ ರೆಪೋ ದರ ಹೆಚ್ಚಳ ಮಾಡಲಾಗಿತ್ತು. ಇದರ ನಂತರ ಮೊದಲ ಬಾರಿಗೆ ರೆಪೋ ದರವನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಆರ್‌ಬಿಐ ನಿರ್ಧರಿಸಿತ್ತು. ಮುಂದಿನ ಹಣಕಾಸು ನೀತಿ ಪರಿಶೀಲನಾ ಸಭೆಯು ಜೂನ್ 6ರಿಂದ 8ರವರೆಗೆ ನಡೆಯಲಿದೆ.
ಇದನ್ನೂ ಓದಿ:ರೆಪೋದರ ಯಥಾಸ್ಥಿತಿ: ಶೇ 6.5ರಲ್ಲಿ ಮುಂದುವರಿಸಲು ಆರ್‌ಬಿಐ ನಿರ್ಧಾರ