ದುಬೈ, ಯುಎಇ:ಜಾಗತೀಕರಣದ ಪ್ರಭಾವದಿಂದಾಗಿ ಕರೆನ್ಸಿಗಳು ಆಯಾ ದೇಶಗಳಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಬಹುಮುಖ್ಯವಾಗಿದೆ. ಹೀಗಾಗಿ ಗಡಿಯಾಚೆ ಸ್ಥಳೀಯ ಕರೆನ್ಸಿ ಬೆಳೆಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮತ್ತು ಯುಎಇಯ ಸೆಂಟ್ರಲ್ ಬ್ಯಾಂಕ್(CBUAE) ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿವೆ. ಗಡಿಯಾಚೆಗಿನ ವಹಿವಾಟುಗಳಿಗೆ ಆ ದೇಶದ ಕರೆನ್ಸಿಯ ಬಳಕೆ ಉತ್ತೇಜಿಸಲು ಮತ್ತು ಪಾವತಿ, ಸಂದೇಶ ವ್ಯವಸ್ಥೆಯನ್ನು ಪರಸ್ಪರ ಲಿಂಕ್ ಮಾಡುವ 2 ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿವೆ.
ಲೋಕಲ್ ಕರೆನ್ಸಿ ಸೆಟಲ್ಮೆಂಟ್ ಸಿಸ್ಟಮ್ (LCSS) ಅನ್ನು ಜಾರಿಗೆ ತರುವ ಗುರಿಯೊಂದಿಗೆ ಆರ್‌ಬಿಐ ಮತ್ತು ಸಿಬಿಯುಎಇ ಗವರ್ನರ್‌ಗಳು ಎರಡು ಏಷ್ಯಾದ ದೇಶಗಳ ನಡುವಿನ ವಹಿವಾಟಿಗಾಗಿ ಸ್ಥಳೀಯ ಕರೆನ್ಸಿಗಳ ಬಳಕೆಯನ್ನು ಅನುಮೋದಿಸಿದರು. ಇದರಲ್ಲಿ ಎಲ್ಲ ಚಾಲ್ತಿ ಖಾತೆ ವಹಿವಾಟುಗಳು ಮತ್ತು ಅನುಮತಿಸಲಾದ ಬಂಡವಾಳ ಖಾತೆ ವಹಿವಾಟುಗಳನ್ನೂ ಇದು ಒಳಗೊಂಡಿರುತ್ತದೆ.
ಲೋಕಲ್ ಕರೆನ್ಸಿ ಸೆಟಲ್ಮೆಂಟ್ ಸಿಸ್ಟಮ್ನಿಂದಾಗಿ ಇನ್ನು ಮುಂದೆ ರಫ್ತುದಾರರು ಹಾಗೂ ಆಮದುದಾರರು ತಮ್ಮ ಸ್ಥಳೀಯ ಕರೆನ್ಸಿಗಳ ಮೂಲಕವೇ ವಹಿವಾಟು ನಡೆಸಲು ಅನುವು ಮಾಡಿಕೊಡಲಿದೆ. ಇದು ರುಪೀ ಮತ್ತು ಎಇಡಿ ವಿದೇಶಿ ವಿನಿಮಯ ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸುತ್ತದೆ ಎಂದು ಆರ್‌ಬಿಐ ತಿಳಿಸಿದೆ.
ಯುಪಿಐ ವಹಿವಾಟಿಗೂ ಓಕೆ:ಸ್ಥಳೀಯ ಕರೆನ್ಸಿಗಳ ಬಳಕೆಯ ಜೊತೆಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಯುಎಇ ಸೆಂಟ್ರಲ್ ಬ್ಯಾಂಕ್ ಆಫ್ ಗವರ್ನರ್ ಎಚ್.ಇ.ಖಲೀದ್ ಮೊಹಮದ್ ಬಾಲಾಮಾ ಅವರು ಭಾರತದ ತ್ವರಿತ ಪಾವತಿ ವ್ಯವಸ್ಥೆಯಾದ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮತ್ತು ಯುಎಇಯ ತ್ವರಿತ ಪಾವತಿ ಪ್ಲಾಟ್‌ಫಾರ್ಮ್ ಆದ ಐಪಿಪಿಯೊಂದಿಗೆ ಲಿಂಕ್ ಆಗಲೂ ಸಹ ಒಪ್ಪಿಗೆ ಸೂಚಿಸಿದರು.