ಹೈದರಾಬಾದ್:2022-23 ರ ಸಾಲಿನ ಹಣಕಾಸು ವರ್ಷದ 7 ತಿಂಗಳೊಳಗೆ ಮೊಬೈಲ್ ರಫ್ತು 10 ಬಿಲಿಯನ್ (ಸುಮಾರು ಒಂದು ಸಾವಿರ ಕೋಟಿ) ಅಮೆರಿಕನ್ ಡಾಲರ್ಗೆ ತಲುಪಿದೆ. ಕಳೆದ ವರ್ಷದ ಇದೇ 7 ತಿಂಗಳ ಅವಧಿಯಲ್ಲಿ ಕೇವಲ 4.97 ಬಿಲಿಯನ್ ಡಾಲರ್ ವಹಿವಾಟು ನಡೆದಿತ್ತು. ಈ ವರ್ಷ ಇದು ಶೇಕಡಾ 60ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಈ ಬಗ್ಗೆ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಪ್ರಸಕ್ತ ಹಣಕಾಸು ವರ್ಷದ 7 ತಿಂಗಳಲ್ಲಿ ಮೊಬೈಲ್ ರಫ್ತು ಗಣನೀಯ ಪ್ರಮಾಣದಲ್ಲಿ ತಲುಪಿದೆ. ಕಡಿಮೆ ಅವಧಿಯಲ್ಲಿ 10 ಬಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು ಒಂದಿ ಸಾವಿರ ಕೋಟಿಯಷ್ಟು ವಹಿವಾಟು ನಡೆಸಲಾಗಿದೆ. ಕಳೆದ ವರ್ಷ ಇಷ್ಟೇ ಅವಧಿಯಲ್ಲಿ 4.97 ಬಿಲಿಯನ್ ಡಾಲರ್ (500 ಕೋಟಿ ರೂಪಾಯಿ) ರಫ್ತು ವಹಿವಾಟು ನಡೆಸಲಾಗಿತ್ತು. ಅಂದರೆ ಈ ಸಾಲಿನಲ್ಲಿ ಶೇಕಡಾ 60 ರಷ್ಟು ಹೆಚ್ಚಾಗಿದೆ. ಪ್ರತಿ ತಿಂಗಳು ಸರಾಸರಿ 1 ಬಿಲಿಯನ್ ಡಾಲರ್ ಮೊಬೈಲ್ಗಳನ್ನು ರಫ್ತು ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಶ್ವದ ಎಲ್ಲ ಮೊಬೈಲ್ ತಯಾರಕ ಕಂಪನಿಗಳು ಭಾರತದಲ್ಲಿ ತಮ್ಮ ಘಟಕಗಳನ್ನು ಹೊಂದಿವೆ. ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆ, ಟೆಲಿಕಾಂ ಉತ್ಪಾದನೆಯು ಗಣನೀಯವಾಗಿ ಬೆಳೆಯುತ್ತದೆ. ಇದು ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.