ಮುಂಬೈ:ಸಾಲದ ಸುಳಿಗೆ ಸಿಲುಕಿರುವ ಅನಿಲ್ ಅಂಬಾನಿ ಒಡೆತನದ ಕಂಪನಿ ರಿಲಯನ್ಸ್ ಕ್ಯಾಪಿಟಲ್ ಖರೀದಿಗೆ ಎರಡನೇ ಸುತ್ತಿನ ಹರಾಜು ಪ್ರಕ್ರಿಯೆ ನಡೆದಿದೆ. ಇದನ್ನು ಖರೀದಿಸಲು ಹಲವು ಕಂಪನಿಗಳು ಬಿಡ್‌ದಾರರ ರೇಸ್‌ನಲ್ಲಿದ್ದವು. ಆದರೆ, ಹಿಂದೂಜಾ ಗ್ರೂಪ್ ಕಂಪನಿಯಾಗಿರುವ ಇಂಡಸ್‌ಇಂಡ್ ಇಂಟರ್‌ನ್ಯಾಷನಲ್ ಹೋಲ್ಡಿಂಗ್ಸ್ (ಐಐಎಚ್‌ಎಲ್) ಮಾತ್ರ ಬಿಡ್ ಮಾಡಿದೆ ಎಂದು ವರದಿಯೊಂದು ಹೇಳಿದೆ. ಕಂಪನಿಯು ರಿಲಯನ್ಸ್‌ಗೆ 9,650 ಕೋಟಿ ರೂಪಾಯಿಗಳ ಮುಂಗಡ ಹಣ ನೀಡುವ ಆಫರ್ ನೀಡಿದೆ ಎನ್ನಲಾಗಿದೆ. ಇನ್ನೆರಡು ಬಿಡ್ಡರ್ಗಳಾದ ಟೊರೆಂಟ್ ಇನ್ವೆಸ್ಟ್‌ಮೆಂಟ್ಸ್ ಮತ್ತು ಓಕ್ ಟ್ರೀ ಎರಡನೇ ಸುತ್ತಿನ ಹರಾಜಿನಲ್ಲಿ ಭಾಗವಹಿಸಲಿಲ್ಲ. ಹರಾಜಿನಲ್ಲಿ ಭಾಗವಹಿಸುವುದಾಗಿ ಇವೆರಡೂ ಕಂಪನಿಗಳು ಈ ಹಿಂದೆಯೇ ಹೇಳಿದ್ದವು.
ರಿಲಯನ್ಸ್ ಕ್ಯಾಪಿಟಲ್ಗಾಗಿ ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ಮೊದಲ ಹಂತದ ಬಿಡ್ಡಿಂಗ್ನಲ್ಲಿ ಟಾರೆಂಟ್ ಟೆಕ್ನಾಲಜಿಯು 8,640 ಕೋಟಿ ರೂಪಾಯಿಯ ಬಿಡ್ ಮಾಡಿತ್ತು. ಐಐಎಚ್‌ಎಲ್ ಕಂಪನಿಯು ಇದಕ್ಕೂ ಹೆಚ್ಚು ಅಂದರೆ 9650 ಕೋಟಿ ರೂಪಾಯಿ ಬಿಡ್ ಮಾಡಿತ್ತು. ಮಾಧ್ಯಮ ವರದಿಗಳ ಪ್ರಕಾರ, ಸಾಲಗಾರರ ಸಮಿತಿಯು (CoC) ಮೊದಲ ಸುತ್ತಿಗೆ 9500 ಕೋಟಿ ರೂಪಾಯಿ ಮತ್ತು ಎರಡನೇ ಸುತ್ತಿಗೆ 10000 ಕೋಟಿ ರೂಪಾಯಿಗಳ ಕನಿಷ್ಠ ಬಿಡ್ ಮೊತ್ತವನ್ನು ನಿಗದಿಪಡಿಸಿದೆ. CoC ಮತ್ತೊಂದು ಷರತ್ತನ್ನು ಹಾಕಿದೆ. ಅದರ ಪ್ರಕಾರ ಎಲ್ಲಾ ಬಿಡ್‌ಗಳಲ್ಲಿ ಕನಿಷ್ಠ 8000 ಕೋಟಿ ರೂಪಾಯಿಗಳ ಮುಂಗಡ ನಗದು ಪಾವತಿ ಮಾಡುವುದು ಅಗತ್ಯವಾಗಿದೆ. ಆದರೆ ಐಐಎಚ್‌ಎಲ್ ಸಂಪೂರ್ಣ ಬಿಡ್ ಮೊತ್ತವಾದ 9650 ಕೋಟಿ ರೂಪಾಯಿಗಳನ್ನು ಮುಂಗಡ ಪಾವತಿ ಮಾಡಿದೆ.