ನವದೆಹಲಿ:ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) 2023 ರ ಮೊದಲ ಎರಡು ವಾರಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಸುಮಾರು 15,068 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿಯ ಇತ್ತೀಚಿನ ಮಾಹಿತಿಯು ತೋರಿಸಿದೆ. ವಿದೇಶಿ ಹೂಡಿಕೆದಾರರು ಮತ್ತೆ ಕೋವಿಡ್ ಅಲೆ ಬರುವ ಅಪಾಯ ಹಾಗೂ ಜಾಗತಿಕ ಆರ್ಥಿಕ ಹಿಂಜರಿತದ ಸಮಸ್ಯೆಗಳಿಂದ ಚಿಂತಿತರಾಗಿದ್ದಾರೆ. ಡಿಪಾಸಿಟರಿಯ ಅಂಕಿಅಂಶಗಳ ಪ್ರಕಾರ, ಈ ತಿಂಗಳ 10 ವಹಿವಾಟಿನ ದಿನಗಳಲ್ಲಿ ಎರಡು ದಿನ ಮಾತ್ರ ಸಾಗರೋತ್ತರ ಖರೀದಿದಾರರು ಷೇರು ಮಾರುಕಟ್ಟೆಗಳಲ್ಲಿ ನಿವ್ವಳ ಖರೀದಿಗಳನ್ನು ಮಾಡಿದ್ದಾರೆ.
ನವೆಂಬರ್ ಮತ್ತು ಡಿಸೆಂಬರ್ 2022 ರಲ್ಲಿ, ವಿದೇಶಿ ಬಂಡವಾಳ ಹೂಡಿಕೆದಾರರು (FPIs) ನಿವ್ವಳ ಖರೀದಿದಾರರಾಗಿದ್ದರು. ಅವರು ಕ್ರಮವಾಗಿ 36,239 ಕೋಟಿ ಮತ್ತು 11,119 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರು. ನವೆಂಬರ್‌ಗೆ ಮೊದಲು, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಆಗಿನ ಬಲವಾದ ಯುಎಸ್ ಡಾಲರ್ ಸೂಚ್ಯಂಕ, ದುರ್ಬಲ ರೂಪಾಯಿ ಮತ್ತು ವಿತ್ತೀಯ ನೀತಿಯ ಬಿಗಿಗೊಳಿಸುವಿಕೆಯ ಮಧ್ಯೆ ಅವರು ನಿವ್ವಳ ಮಾರಾಟಗಾರರಾಗಿದ್ದರು. ಆಗ ಅವರಿಂದ ಬಂದ ನಿಧಿಯ ಒಳಹರಿವು ಭಾರತೀಯ ಷೇರು ಮಾರುಕಟ್ಟೆಗಳಿಗೆ ಗಣನೀಯವಾಗಿ ಬಲ ನೀಡಿತ್ತು.
ಜುಲೈ, ಆಗಸ್ಟ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಮಾತ್ರ ವಿದೇಶಿ ಬಂಡವಾಳ ಹೂಡಿಕೆದಾರರು ನಿವ್ವಳ ಖರೀದಿದಾರರಾಗಿದ್ದರು. ಈ ಅವಧಿಯನ್ನು ಹೊರತುಪಡಿಸಿದರೆ ವಿದೇಶಿ ಬಂಡವಾಳ ಹೂಡಿಕೆದಾರರು ಒಂದು ವರ್ಷಕ್ಕೂ ಹೆಚ್ಚು ಕಾಲ ಭಾರತೀಯ ಮಾರುಕಟ್ಟೆಗಳಲ್ಲಿ ಇಕ್ವಿಟಿಗಳನ್ನು ಮಾರಾಟ ಮಾಡುತ್ತಿದ್ದರು. ಇವರ ಇಕ್ವಿಟಿ ಮಾರಾಟ ಪ್ರಕ್ರಿಯೆಯು ವಿವಿಧ ಕಾರಣಗಳಿಗಾಗಿ ಅಕ್ಟೋಬರ್ 2021 ರಲ್ಲಿ ಪ್ರಾರಂಭವಾಗಿತ್ತು.
2022 ರಲ್ಲಿ, ವಿದೇಶಿ ಬಂಡವಾಳ ಹೂಡಿಕೆದಾರರು ಒಟ್ಟಾರೆಯಾಗಿ ಭಾರತದಲ್ಲಿ 121,439 ಕೋಟಿ ಮೌಲ್ಯದ ಷೇರುಗಳನ್ನು ಸಂಚಿತ ಆಧಾರದ ಮೇಲೆ ಮಾರಾಟ ಮಾಡಿದ್ದಾರೆ ಎಂದು NSDL ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಡೇಟಾ ತೋರಿಸಿದೆ. ಡಾಲರ್ ಮೌಲ್ಯದ ಸರಕುಗಳಿಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು US ಡಾಲರ್ ಬಲವಾಗುತ್ತಿರುವುದು ಸೇರಿದಂತೆ ಮುಂದುವರಿದ ದೇಶದ ಆರ್ಥಿಕತೆಗಳಲ್ಲಿ ಬಿಗಿಯಾದ ಹಣಕಾಸು ನೀತಿಗಳಿಂದ ಭಾರತೀಯ ಮಾರುಕಟ್ಟೆಗಳಿಂದ ಸ್ಥಿರವಾಗಿ ಹಣದ ಹೊರಹರಿವು ಸಂಭವಿಸಿದೆ. ಮಾರುಕಟ್ಟೆಗಳಲ್ಲಿ ಅನಿಶ್ಚಿತತೆ ಇದ್ದಾಗ ಹೂಡಿಕೆದಾರರು ಸಾಮಾನ್ಯವಾಗಿ ಸ್ಥಿರ ಮಾರುಕಟ್ಟೆಗಳತ್ತ ಚಲಿಸುತ್ತಾರೆ.
ಏತನ್ಮಧ್ಯೆ, ವಿಶ್ವಬ್ಯಾಂಕ್ 2023 ರಲ್ಲಿ ಜಾಗತಿಕ ಆರ್ಥಿಕತೆಯು ಕೇವಲ 1.7 ಪ್ರತಿಶತದಷ್ಟು ಬೆಳೆಯುತ್ತದೆ ಎಂದು ಅಂದಾಜಿಸಿದೆ. ಇದು ಅದರ ಹಿಂದಿನ ಮುನ್ಸೂಚನೆಯಲ್ಲಿ ಅಂದಾಜು ಮಾಡಿದ ಶೇಕಡಾ 3 ಕ್ಕಿಂತ ಕಡಿಮೆಯಾಗಿದೆ. 2024 ರಲ್ಲಿ, ಜಾಗತಿಕ ಆರ್ಥಿಕತೆಯು ಹಿಂದಿನ ಅಂದಾಜಿನ 3 ಪ್ರತಿಶತಕ್ಕೆ ವಿರುದ್ಧವಾಗಿ 2.7 ಪ್ರತಿಶತದಷ್ಟು ಬೆಳೆಯುವ ನಿರೀಕ್ಷೆಯಿದೆ. ವಿಶ್ವಬ್ಯಾಂಕ್‌ನ ಇತ್ತೀಚಿನ ಗ್ಲೋಬಲ್ ಎಕನಾಮಿಕ್ ಪ್ರಾಸ್ಪೆಕ್ಟ್ಸ್ ವರದಿಯ ಪ್ರಕಾರ, ಹೆಚ್ಚಿದ ಹಣದುಬ್ಬರ, ಹೆಚ್ಚಿನ ಬಡ್ಡಿದರಗಳು, ಕಡಿಮೆ ಹೂಡಿಕೆ ಮತ್ತು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದಿಂದ ಉಂಟಾದ ಅಡಚಣೆಗಳ ಕಾರಣದಿಂದ ಜಾಗತಿಕ ಬೆಳವಣಿಗೆಯು ತೀವ್ರವಾಗಿ ನಿಧಾನವಾಗುತ್ತಿದೆ.
ದುರ್ಬಲವಾದ ಆರ್ಥಿಕ ಪರಿಸ್ಥಿತಿಗಳನ್ನು ಗಮನಿಸಿದರೆ, ಯಾವುದೇ ಹೊಸ ಪ್ರತಿಕೂಲ ಬೆಳವಣಿಗೆಗಳಾದ ನಿರೀಕ್ಷೆಗಿಂತ ಹೆಚ್ಚಿನ ಹಣದುಬ್ಬರ, ಅದನ್ನು ನಿಯಂತ್ರಿಸಲು ಬಡ್ಡಿದರಗಳಲ್ಲಿ ಹಠಾತ್ ಏರಿಕೆ, ಕೋವಿಡ್ -19 ಪ್ರಕರಣಗಳ ಏರಿಕೆ ಅಥವಾ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕ ಆರ್ಥಿಕತೆಯನ್ನು ಹಿಂಜರಿತಕ್ಕೆ ತಳ್ಳಬಹುದು ಎಂದು ವರದಿ ಹೇಳಿದೆ.
ಇದನ್ನೂ ಓದಿ: ಭಾರತದ ಶೇ 40ರಷ್ಟು ಸಂಪತ್ತಿನ ಭಾಗ ಶೇ 1ರಷ್ಟು ಶ್ರೀಮಂತರ ಬಳಿ ಇದೆ: ವರದಿ