ಕರ್ನಾಟಕ

karnataka

ETV Bharat / business

2023ರಲ್ಲಿ ಅತ್ಯಧಿಕ ಬಡ್ಡಿ ಆದಾಯ ನೀಡುವ ಎಫ್​ಡಿ ಯೋಜನೆ ಯಾವುದು? ಇಲ್ಲಿದೆ ಮಾಹಿತಿ.. - ಈಟಿವಿ ಭಾರತ ಕನ್ನಡ

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್​ ಎಫ್​ಡಿ ಬಡ್ಡಿದರಗಳು ಹೆಚ್ಚಾಗುತ್ತಿವೆ. ನೀವು ಎಫ್​ಡಿಯಲ್ಲಿ ಹೂಡಿಕೆ ಮಾಡಲು ಬಯಸುವಿರಾದರೆ ಯಾವ ಬ್ಯಾಂಕ್ ಅತಿ ಹೆಚ್ಚು ಬಡ್ಡಿದರವನ್ನು ನೀಡುತ್ತಿದೆ ಎಂಬುದನ್ನು ಮೊದಲಿಗೆ ತಿಳಿದುಕೊಳ್ಳಿ.

Fixed Deposits: Get high returns at no risk
Fixed Deposits: Get high returns at no risk

By

Published : May 7, 2023, 1:28 PM IST

ತಾವು ಹೂಡಿದ ಬಂಡವಾಳಕ್ಕೆ ಹೆಚ್ಚಿನ ಆದಾಯವನ್ನು ನಿರೀಕ್ಷಿಸುವವರು ನಷ್ಟದ ಅಪಾಯವನ್ನು ಸಹಿಸಿಕೊಳ್ಳಲು ಸಿದ್ಧರಾಗಿರಬೇಕು. ಹೂಡಿಕೆಯ ಮೇಲೆ ಖಾತರಿ ಆದಾಯವನ್ನು ಒದಗಿಸುವ ಯೋಜನೆಗಳನ್ನು ನೀವು ಆಯ್ಕೆ ಮಾಡಲು ಬಯಸಿದರೆ, ಸ್ಥಿರ ಠೇವಣಿಗಳು (ಎಫ್‌ಡಿಗಳು) ಮೊದಲ ಆದ್ಯತೆಯಾಗಿರಬೇಕು. ಇತ್ತೀಚಿನ ತಿಂಗಳುಗಳಲ್ಲಿ ಹಣದುಬ್ಬರವನ್ನು ತಡೆಯಲು ಆರ್‌ಬಿಐ ಬಡ್ಡಿ ದರಗಳನ್ನು ಏರಿಸುತ್ತಿದೆ. ಇದರಿಂದ ಎಫ್​​ಡಿ ಮೇಲಿನ ಬಡ್ಡಿದರಗಳು ಕೂಡ ಹೆಚ್ಚಾಗುತ್ತಿವೆ. ಹೀಗಾಗಿ ಹೆಚ್ಚಿನ ಬಡ್ಡಿ ನೀಡುವ ಮೂಲಕ ಬ್ಯಾಂಕ್​ಗಳು ಜನರಿಂದ ಆದಷ್ಟೂ ಹೆಚ್ಚಿನ ಮೊತ್ತದ ಠೇವಣಿಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿವೆ.

ಇಂದಿನ ದಿನಗಳಲ್ಲಿ ನಿಶ್ಚಿತ ಅವಧಿಯ ಠೇವಣಿಗಳಿಗೆ ಶೇ 9ಕ್ಕಿಂತ ಹೆಚ್ಚು ಬಡ್ಡಿ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಠೇವಣಿಗಳನ್ನು ಆಯ್ಕೆಮಾಡುವಾಗ ಯಾವ ಮಾನದಂಡಗಳನ್ನು ಅನುಸರಿಸಬೇಕೆಂದು ನೋಡೋಣ. ಒಂದು ವರ್ಷದ ಹಿಂದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗರಿಷ್ಠ ಶೇಕಡಾ 5.5 ರಷ್ಟು ಬಡ್ಡಿ ದರ ನೀಡುತ್ತಿತ್ತು. ಈಗ ಅದನ್ನು ಶೇ 7.10ಕ್ಕೆ ಹೆಚ್ಚಿಸಲಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಶೇಕಡಾ 7.1 ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಶೇಕಡಾ 7.2 ರವರೆಗೆ ಬಡ್ಡಿಯನ್ನು ನೀಡುತ್ತಿವೆ. ಹಿರಿಯ ನಾಗರಿಕರಿಗೆ ಶೇ 0.50 ರಷ್ಟು ಹೆಚ್ಚಿನ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇಕಡಾ 8.51 ರಷ್ಟು ಬಡ್ಡಿ ನೀಡುವುದಾಗಿ ಯೆಸ್ ಬ್ಯಾಂಕ್ ಘೋಷಿಸಿದೆ.

ಹೊಸ ಪೀಳಿಗೆಯ ಸಣ್ಣ ಹಣಕಾಸು ಬ್ಯಾಂಕುಗಳು (SFBs) ದೊಡ್ಡ ಬ್ಯಾಂಕ್‌ಗಳೊಂದಿಗೆ ಸ್ಪರ್ಧಿಸಲು ಬಡ್ಡಿದರಗಳನ್ನು ಹೆಚ್ಚಿಸುತ್ತಿವೆ. ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 999 ದಿನಗಳ ಅವಧಿಗೆ ಶೇಕಡಾ 9.05 (ವಾರ್ಷಿಕ ಇಳುವರಿ) ಬಡ್ಡಿದರವನ್ನು ನೀಡುತ್ತಿದೆ. ಉಜ್ಜೀವನ್ ಸ್ಮಾಲ್ ಫೈನಾನ್ಸ್​ ಬ್ಯಾಂಕ್ 559 ದಿನಗಳ ಠೇವಣಿಯ ಮೇಲೆ ಶೇಕಡಾ 8.20 ಮತ್ತು 560 ದಿನಗಳ ಠೇವಣಿಯ ಮೇಲೆ ಶೇಕಡಾ 8.45 ರಷ್ಟು ಬಡ್ಡಿಯನ್ನು ನೀಡುತ್ತದೆ. ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 1001 ದಿನಗಳ ಅವಧಿಗೆ 9.5 ಶೇಕಡಾ ಬಡ್ಡಿಯನ್ನು ನೀಡುತ್ತಿದೆ.

ಇಕ್ವಿಟಾಸ್ ಸ್ಮಾಲ್ ಫೈನಾನ್ಸ್​ ಬ್ಯಾಂಕ್ 888 ದಿನಗಳ ಠೇವಣಿಗೆ ಶೇಕಡಾ 8.50 ರಷ್ಟು ಬಡ್ಡಿಯನ್ನು ಪಾವತಿಸುತ್ತಿದೆ. ಇದಲ್ಲದೇ ಇತರೆ ಸಣ್ಣ ಹಣಕಾಸು ಬ್ಯಾಂಕ್‌ಗಳು ಕೂಡ ಶೇ 8ಕ್ಕಿಂತ ಹೆಚ್ಚಿನ ಬಡ್ಡಿಯನ್ನು ವಿವಿಧ ಅವಧಿಯ ಠೇವಣಿಗಳಿಗೆ ನೀಡುತ್ತಿವೆ. ಫಿನ್​ಕೇರ್ ಸ್ಮಾಲ್ ಫೈನಾನ್ಸ್​ ಬ್ಯಾಂಕ್ ಹಿರಿಯ ನಾಗರಿಕರಿಗೆ 750 ದಿನಗಳ ಅವಧಿಗೆ ಶೇಕಡಾ 8.71 ರಷ್ಟು ಬಡ್ಡಿಯನ್ನು ನೀಡುತ್ತಿದೆ. ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರಗಳು ಆಯ್ಕೆ ಮಾಡಿದ ಅವಧಿಯನ್ನು ಅವಲಂಬಿಸಿರುತ್ತದೆ. ಪ್ರಸ್ತುತ ಬ್ಯಾಂಕುಗಳು ಎಲ್ಲಾ ಅವಧಿಯ ಠೇವಣಿಗಳಿಗೆ ಹೆಚ್ಚಿನ ಬಡ್ಡಿಯನ್ನು ನೀಡುತ್ತಿಲ್ಲ. ಆದ್ದರಿಂದ, ಅವಧಿಯನ್ನು ಆಯ್ಕೆಮಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು.

ಹೆಚ್ಚಿನ ಬ್ಯಾಂಕುಗಳು ಒಂದು ವರ್ಷ, ಎರಡು ವರ್ಷ ಮತ್ತು ಮೂರು ವರ್ಷಗಳ ಠೇವಣಿಗಳ ಮೇಲೆ ಗರಿಷ್ಠ ಬಡ್ಡಿಯನ್ನು ನೀಡುತ್ತವೆ. ಆದ್ದರಿಂದ, ಠೇವಣಿಯ ಅವಧಿಯನ್ನು ಅವಶ್ಯಕತೆಗೆ ಅನುಗುಣವಾಗಿ ನಿರ್ಧರಿಸಬೇಕು. ಒಂದು ವರ್ಷದ ಅವಧಿಗೆ ಬ್ಯಾಂಕ್ ಗರಿಷ್ಠ ಬಡ್ಡಿಯನ್ನು ಪಾವತಿಸುತ್ತಿದ್ದರೆ, ನೀವು ಅಂಥ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಶ್ಚಿತ ಠೇವಣಿಯು ಸ್ವಯಂಚಾಲಿತವಾಗಿ ನವೀಕರಣವಾಗುವ auto renewal ಸೌಲಭ್ಯವನ್ನು ಆಯ್ಕೆ ಮಾಡಬೇಡಿ. ಆಟೊ ರಿನ್ಯೂವಲ್ ಇಲ್ಲದಿದ್ದಾಗ ನೀವು ಒಂದು ವರ್ಷದ ನಂತರ ಬಡ್ಡಿದರಗಳನ್ನು ಪರಿಶೀಲಿಸಿ ಅದೇ ಬ್ಯಾಂಕ್​ನಲ್ಲಿ ಠೇವಣಿ ಮುಂದುವರಿಸುವುದಾ ಅಥವಾ ಬೇರೆ ಬ್ಯಾಂಕ್​ಗೆ ವರ್ಗಾಯಿಸುವುದಾ ಎಂಬುದನ್ನು ನಿರ್ಧರಿಸಬಹುದು.

ನೀವು ದೊಡ್ಡ ಮೊತ್ತದ ನಿಶ್ಚಿತ ಠೇವಣಿ ಮಾಡಲು ಬಯಸಿದರೆ, ಗರಿಷ್ಠ ಬಡ್ಡಿ ನೀಡುವ ಒಂದು ಬ್ಯಾಂಕ್‌ನಲ್ಲಿ ಒಂದು ವರ್ಷ, ಇನ್ನೊಂದು ಬ್ಯಾಂಕ್‌ನಲ್ಲಿ ಎರಡು ವರ್ಷ ಮತ್ತು ಇನ್ನೊಂದು ಬ್ಯಾಂಕ್‌ನಲ್ಲಿ ಮೂರು ವರ್ಷ ಠೇವಣಿ ಇಡಬಹುದು. ಕೆಲವು ಬ್ಯಾಂಕ್‌ಗಳು ವಿಶೇಷ ಠೇವಣಿ ಯೋಜನೆಗಳನ್ನು ಹೊಂದಿವೆ. ಇದರಲ್ಲಿ ಪ್ರಮುಖವಾದ ಯೋಜನೆಗಳೆಂದರೆ: ಹಿರಿಯ ನಾಗರಿಕರಿಗೆ ಎಸ್‌ಬಿಐ ನ ಅಮೃತ್ ಕಲಶ್ 400 ದಿನಗಳ ವಿಶೇಷ ಠೇವಣಿಯ ಮೇಲೆ ಶೇಕಡಾ 7.6 ಬಡ್ಡಿಯನ್ನು ನೀಡುತ್ತದೆ. ಹಾಗೆಯೇ ಐಡಿಬಿಐ ಬ್ಯಾಂಕ್ ಅಮೃತ್ ಮಹೋತ್ಸವ ಎಫ್‌ಡಿಯಲ್ಲಿ 444 ದಿನಗಳ ಅವಧಿಗೆ ಹಿರಿಯ ನಾಗರಿಕರಿಗೆ ಶೇಕಡಾ 7.65 ಬಡ್ಡಿ ನೀಡಲಾಗುತ್ತಿದೆ. ಬ್ಯಾಂಕ್ ಆಫ್ ಇಂಡಿಯಾ 'ಶುಭ್ ಆರಂಭ್ ಠೇವಣಿ' ಎಂಬ ವಿಶೇಷ ಯೋಜನೆಯಲ್ಲಿ 501 ದಿನಗಳ ಅವಧಿಗೆ ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಶೇ 7.80 ಮತ್ತು ಹಿರಿಯ ನಾಗರಿಕರಿಗೆ ಶೇ 7.65 ಬಡ್ಡಿಯನ್ನು ನೀಡುತ್ತಿದೆ.

ಇದನ್ನೂ ಓದಿ : ಉದ್ಯೋಗ ಪಡೆಯಲು ಡಿಗ್ರಿಗಳಿಗಿಂತ ಕೌಶಲಗಳು ಮುಖ್ಯ: ವೃತ್ತಿಪರರ ಪ್ರತಿಪಾದನೆ

ABOUT THE AUTHOR

...view details