ಹೈದರಾಬಾದ್: ಭಾರತದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ನೇತೃತ್ವದ ಸಮೂಹ ಕಂಪನಿಗಳ ಷೇರುಗಳ ಮಹಾ ಕುಸಿತಕ್ಕೆ ಕಾರಣವಾಗಿದ್ದ ಅಮೆರಿಕ ಮೂಲದ ಕಿರು ಮಾರಾಟಗಾರ ಹಿಂಡೆನ್ಬರ್ಗ್ ರಿಸರ್ಚ್ ಈಗ ಆಫ್ರಿಕನ್ ವ್ಯಾಪಾರ ಸಾಮ್ರಾಜ್ಯವೊಂದು ಕಾನೂನು ಬದ್ಧವಲ್ಲದ ಹಣಕಾಸುಗಳನ್ನು ನಿರ್ಮಿಸುತ್ತಿದೆ ಎಂದು ಆರೋಪಿಸಿದೆ, ಇದು ಅಸಾಧಾರಣವಾದ ಸ್ಪಷ್ಟ ಹಗರಣ ಎಂದು ಬಣ್ಣಿಸಿದೆ. ಈ ಮೂಲಕ ಮತ್ತೊಂದು ಬಾಂಬ್ ಸಿಡಿಸಿ ಚರ್ಚೆಗೆ ಕಾರಣವಾಗಿದೆ.
ETV ಭಾರತ್ಗೆ ಲಭ್ಯವಾಗಿರುವ ಸಂಶೋಧನಾ ವರದಿಯಲ್ಲಿ, ಹಿಂಡೆನ್ಬರ್ಗ್ ರಿಸರ್ಚ್ ನ್ಯೂಜೆರ್ಸಿಯ ಪ್ರಧಾನ ಕಚೇರಿಯ ಟಿಂಗೊ ಗ್ರೂಪ್ ಆರ್ಥಿಕ ವಂಚನೆ ಮಾಡಿದೆ. ಇದಕ್ಕಾಗಿ ಅದು ನಕಲಿ ರೈತರು, ಹಣಕಾಸು ಮತ್ತು ಫೋನ್ಗಳನ್ನು ಬಳಸುತ್ತಿದೆ ಎಂದು ಆರೋಪಿಸಿದೆ. ಇದು ಕಂಪನಿಯ ಷೇರು ಬೆಲೆಗಳಲ್ಲಿ ಅಲ್ಪ ಇಳಿಕೆಗೆ ಕೂಡಾ ಕಾರಣವಾಗಿದೆ.
ಹಿಂಡೆನ್ಬರ್ಗ್ ಮಾಡಿರುವ ಆರೋಪಗಳ ಪರಿಣಾಮವಾಗಿ, NASDAQ ಸ್ಟಾಕ್ ಎಕ್ಸೆಂಜ್ನಲ್ಲಿ ಪಟ್ಟಿ ಮಾಡಲಾದ Tingo Group Inc ನ ಷೇರು ಬೆಲೆಯು ಶೇ 16% ಕ್ಕಿಂತ ಹೆಚ್ಚು ಕುಸಿತ ದಾಖಲಿಸಿದೆ. ವರದಿ ಪ್ರಕಾರ, Tingo ಗ್ರೂಪ್ ಪ್ರಾಥಮಿಕವಾಗಿ ನೈಜೀರಿಯಾದಲ್ಲಿರುವ ರೈತರಿಗೆ ಮೊಬೈಲ್ ಫೋನ್ಗಳು, ಆಹಾರ ಸಂಸ್ಕರಣೆ ಮತ್ತು ಆನ್ಲೈನ್ ಆಹಾರ ಮಾರುಕಟ್ಟೆಯನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸಿ ಹಲವಾರು ವ್ಯಾಪಾರ ವಿಭಾಗಗಳನ್ನು ಹೊಂದಿದೆ ಎಂದು ಹೇಳಿಕೊಂಡಿದೆ.
ಡೋಜಿ ಎಂಮೊಬುಸಿಯ ನೇತೃತ್ವದಲ್ಲಿ ಟಿಂಗೋ ಕಂಪನಿ ಸ್ಥಾಪಿಸಲಾಯಿತು. ಇದು ಆಫ್ರಿಕಾದ ಬಿಲೆನಿಯರ್ ಕಂಪನಿಯಾಗಿದೆ. ಕೃಷಿ ಹಿಡುವಳಿಯ ಪ್ರಮುಖ ಕಂಪನಿಯಾಗಿರುವ ಇದು, ಈ ವರ್ಷದ ಆರಂಭದಲ್ಲಿ ಪ್ರೀಮಿಯರ್ ಲೀಗ್ ಸಾಕರ್ ತಂಡವಾಗಿರುವ ಶೆಫೀಲ್ಡ್ ಯುನೈಟೆಡ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿದಾಗ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು.
ಅದಾದ ಬಳಿಕ ಈ ಕಂಪನಿ ವ್ಯವಹಾರಗಳ ವಿಶ್ವಕ್ಕೆ ಪರಿಚಯವಾಗಿತ್ತು. ಈ ಬಗ್ಗೆ ವರದಿ ಮಾಡಿರುವ ಹಿಂಡೆನ್ಬರ್ಗ್, "ನಾವು ಡೋಜಿಯ ಹಿನ್ನೆಲೆಯೊಂದಿಗೆ ಅವರ ಪ್ರಮುಖ ಕಾನೂನುಬದ್ದವಲ್ಲದ ವ್ಯವಹಾರಗಳನ್ನು ಗುರುತಿಸಿದ್ದೇವೆ. ಆರಂಭಿಕವಾಗಿ ನೈಜೀರಿಯಾದಲ್ಲಿ ಮೊದಲ ಮೊಬೈಲ್ ಪಾವತಿ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ ಮೂಲ ವ್ಯಕ್ತಿಯನ್ನು ಸಂಪರ್ಕಿಸಿ, ಅವರಿಂದ ಖಚಿತ ಪಡಿಸಿಕೊಂಡಿದ್ದೇವೆ. ಅಪ್ಲಿಕೇಶನ್ನ ನಿಜವಾದ ಸೃಷ್ಟಿಕರ್ತನನ್ನು ಸಂಪರ್ಕಿಸಿದ್ದೇವೆ. ಅವರಿಂದ ಡೋಜಿ ಅವರ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಈ ಆ್ಯಪ್ ಬಗ್ಗೆ ಡೋಜಿ ಹೇಳುತ್ತಿರುವುದು ಸುಳ್ಳು ಎಂಬುದನ್ನ ಅವರು ಮೂಲ ಸೃಷ್ಟಿಕರ್ತರು ನಮಗೆ ಹೇಳಿದ್ದಾರೆ ಎಂದು ಹಿಂಡೆಬರ್ಗ್ ರಿಸರ್ಚ್ ETV ಭಾರತ್ಗೆ ಕಳುಹಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.
ವರದಿ ಹೇಳುತ್ತಿರುವುದು ಏನು?:ವರದಿಯ ಪ್ರಕಾರ 2007 ರಲ್ಲಿ ಮಲೇಷಿಯಾದ ವಿಶ್ವವಿದ್ಯಾನಿಲಯದಿಂದ ಗ್ರಾಮೀಣ ಪ್ರಗತಿ ವಿಷಯದಲ್ಲಿ ಪಿಎಚ್ಡಿ ಪಡೆದಿದ್ದೇನೆ ಎಂದು ಡೋಜಿ ಹೇಳಿಕೊಂಡಿದ್ದಾರೆ. ಸಂಶೋಧನಾ ವರದಿಯು ಟಿಂಗೊ ಗ್ರೂಪ್ನ ಸಿಇಒ ಡೋಜಿ ಎಂಮೊಬುಸಿಯ ಮೇಲೆ ವಿಶೇಷವಾಗಿ ಆಸಕ್ತಿ ವಹಿಸಿ ತನಿಖೆ ನಡೆಸಿದೆ. ಅಷ್ಟೇ ಅಲ್ಲ ಅವರು ಆ ವಿಶ್ವವಿದ್ಯಾಲಯದ ಪದವಿ ಪಡೆದಿರುವ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದೆ.