ನವದೆಹಲಿ : ಚಿನ್ನದ ಗಟ್ಟಿಗಳಿಗೆ ಕಡ್ಡಾಯವಾಗಿ ಹಾಲ್ ಮಾರ್ಕಿಂಗ್ ಮಾಡುವ ನಿಯಮ ಇದೇ ಜುಲೈ 1 ರಿಂದ ಜಾರಿಯಾಗುವ ಸಾಧ್ಯತೆಗಳಿಲ್ಲ ಎಂದು ವರದಿಗಳು ತಿಳಿಸಿವೆ. ಸಂಬಂಧಿಸಿದ ಉದ್ಯಮದ ಪ್ರತಿನಿಧಿಗಳೊಂದಿಗೆ ಕೇಂದ್ರ ಸರ್ಕಾರವು ಈ ಬಗ್ಗೆ ಈಗಷ್ಟೇ ಮಾತುಕತೆ ಆರಂಭಿಸಿರುವುದರಿಂದ ನಿಯಮ ಈಗಲೇ ಕಡ್ಡಾಯವಾಗದು ಎನ್ನಲಾಗಿದೆ. ಜುಲೈ 1 ರಿಂದ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸುವ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿರುವುದನ್ನು ಒಪ್ಪಿಕೊಂಡಿರುವ ಗ್ರಾಹಕ ವ್ಯವಹಾರಗಳ ಇಲಾಖೆಯು, ಅಂಥ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದು ಹೇಳಿದೆ.
ಚಿನ್ನಕ್ಕೆ ಹಾಲ್‌ಮಾರ್ಕಿಂಗ್ ಕಡ್ಡಾಯ ನಿಯಮ ಜುಲೈ 1 ರಿಂದ ಜಾರಿಗೆ ಬರುವುದಿಲ್ಲ. ಅದನ್ನು ಕಡ್ಡಾಯಗೊಳಿಸುವ ಪ್ರಕ್ರಿಯೆಯು ಈಗಷ್ಟೇ ಪ್ರಾರಂಭವಾಗಿದೆ. ಪ್ರಕ್ರಿಯೆಯನ್ನು ಪ್ರಾರಂಭಿಸಲು ಉಪ ಸಮಿತಿಯನ್ನು ರಚಿಸಲಾಗಿದೆ ಮತ್ತು ಎಲ್ಲಾ ಮಧ್ಯಸ್ಥಗಾರರೊಂದಿಗೆ ಚರ್ಚೆಗಳು ನಡೆಯುತ್ತಿವೆ ಎಂದು ಎಂದು ಉನ್ನತ ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಮುಖ್ಯಸ್ಥ ಪ್ರಮೋದ್ ಕುಮಾರ್ ತಿವಾರಿ ಅವರು ಈ ವರ್ಷದ ಮಾರ್ಚ್‌ನಲ್ಲಿ ಚಿನ್ನದ ಗಟ್ಟಿಗಳ ಹಾಲ್‌ಮಾರ್ಕ್ ಅನ್ನು ಕಡ್ಡಾಯಗೊಳಿಸಲು ಸರ್ಕಾರ ಯೋಜಿಸಿದೆ ಮತ್ತು ಕರಡು ಮಾರ್ಗಸೂಚಿಗಳೊಂದಿಗೆ ಸಿದ್ಧವಾಗಿದೆ ಎಂದು ಹೇಳಿದ್ದರು.
ಚಿನ್ನದ ಗಟ್ಟಿಯನ್ನು ಆಭರಣಗಳ ತಯಾರಿಕೆಗೆ ಕಚ್ಚಾ ವಸ್ತುವಾಗಿ ಬಳಸಲಾಗುತ್ತದೆ. ಬಹಳ ದೊಡ್ಡ ಪ್ರಮಾಣದಲ್ಲಿ ಚಿನ್ನಾಭರಣ ತಯಾರಿಸಲು ಗಟ್ಟಿಗಳನ್ನು ಬಳಸುವುದರಿಂದ ಅದು ಪರಿಶುದ್ಧವಾಗಿರುವುದು ಅತ್ಯಗತ್ಯ. ಹಾಲ್ ಮಾರ್ಕ್ ಮಾಡಿದ ಚಿನ್ನದ ಗಟ್ಟಿಗಳು ದೇಶದಲ್ಲಿ ತಯಾರಾಗುತ್ತಿರುವ ಚಿನ್ನದ ಆಭರಣಗಳ ಅಪೇಕ್ಷಿತ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಭಾರತವು ವಿಶ್ವದ ಅತಿದೊಡ್ಡ ಗ್ರಾಹಕ ಮತ್ತು ಚಿನ್ನದ ಆಮದುದಾರ ದೇಶವಾಗಿದೆ. ದೇಶವು ವಾರ್ಷಿಕವಾಗಿ ಸುಮಾರು 700 ರಿಂದ 800 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ.