ಕರ್ನಾಟಕ

karnataka

ETV Bharat / business

Sensex: ಹೊಸ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್: ಮೊದಲ ಬಾರಿಗೆ 65,000 ಗಡಿ ದಾಟಿ ಸಾರ್ವಕಾಲಿಕ ದಾಖಲೆ! - ಸೆನ್ಸೆಕ್ಸ್ ವಹಿವಾಟು

ಭಾರತೀಯ ಷೇರುಪೇಟೆ ಮತ್ತೊಂದು ಮೈಲುಗಲ್ಲು ನೆಟ್ಟಿದೆ. ಮೊಟ್ಟಮೊದಲ ಬಾರಿಗೆ 65 ಸಾವಿರ ಅಂಕಗಳ ಗಡಿ ದಾಟಿ ದಾಖಲೆ ಬರೆದಿದೆ.

ಸೆನ್ಸೆಕ್ಸ್​ ಸಾರ್ವಕಾಲಿಕ ದಾಖಲೆ
ಸೆನ್ಸೆಕ್ಸ್​ ಸಾರ್ವಕಾಲಿಕ ದಾಖಲೆ

By

Published : Jul 3, 2023, 11:33 AM IST

ಮುಂಬೈ:ಭಾರತೀಯ ಷೇರುಪೇಟೆ ನಿರಂತರ ಏರಿಕೆ ದಾಖಲಿಸುತ್ತಿದೆ. ಸೋಮವಾರವೂ ಉತ್ತಮ ಗಳಿಕೆ ಮಾಡಿದ ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್​ ಇದೇ ಮೊದಲ ಬಾರಿಗೆ 65,000 ಅಂಕಗಳ ಗಡಿ ದಾಟಿ ಹೊಸ ವಿಕ್ರಮ ಸಾಧಿಸಿತು. ಇದೇ ವೇಳೆ ನಿಫ್ಟಿ ಕೂಡ ಉತ್ತಮ ವಹಿವಾಟು ನಡೆಸಿ 19,000 ಪಾಯಿಂಟ್ಸ್​ ಮೀರಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಮತ್ತು ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಳ ಇದಕ್ಕೆ ಪ್ರಮುಖ ಕಾರಣವೆಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.

ಸತತ ನಾಲ್ಕನೇ ದಿನವೂ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ ಲಾಭದತ್ತ ಮುನ್ನುಗ್ಗುತ್ತಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ 449.46 ಪಾಯಿಂಟ್‌ಗಳಿಗೆ ಜಿಗಿದು ಸಾರ್ವಕಾಲಿಕ ಗರಿಷ್ಠ 65,168.02 ತಲುಪಿತು. ಎನ್‌ಎಸ್‌ಇ ನಿಫ್ಟಿ 128.95 ಪಾಯಿಂಟ್‌ಗಳ ಏರಿಕೆ ಕಂಡು ಗರಿಷ್ಠ ಮಟ್ಟವಾದ 19,318ಕ್ಕೆ ತಲುಪಿದೆ.

ಯಾರಿಗೆ ಲಾಭ?: ಸೆನ್ಸೆಕ್ಸ್ ವಹಿವಾಟಿನಲ್ಲಿ ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಮಹೀಂದ್ರಾ ಮತ್ತು ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫಿನ್‌ಸರ್ವ್ ಮತ್ತು ಐಸಿಐಸಿಐ ಬ್ಯಾಂಕ್ ಪ್ರಮುಖ ಲಾಭ ಗಳಿಸಿದವು. ಇದೇ ವೇಳೆ ಪವರ್ ಗ್ರಿಡ್, ಮಾರುತಿ, ಟೆಕ್ ಮಹೀಂದ್ರಾ, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ಆಕ್ಸಿಸ್ ಬ್ಯಾಂಕ್ ಲಾಭ ಗಳಿಕೆಯಲ್ಲಿ ಹಿಂದೆ ಬಿದ್ದಿವೆ.

ಇದನ್ನೂ ಓದಿ: ಸಾರ್ವಕಾಲಿಕ ಎತ್ತರಕ್ಕೆ ಷೇರು ಮಾರುಕಟ್ಟೆ: ಹೆಚ್ಚುವರಿ ಮೌಲ್ಯಮಾಪನವೇ ಕಳವಳಕಾರಿ ಎಂದ ವಿಶ್ಲೇಷಕರು

ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಕಾಂಗ್‌ ಷೇರುಪೇಟೆಗಳು ಕೂಡ ಲಾಭದ ವಹಿವಾಟು ನಡೆಸುತ್ತಿವೆ. ಇದೇ ವೇಳೆ ಅಮೆರಿಕದ ಮಾರುಕಟ್ಟೆಗಳು ಗಣನೀಯವಾಗಿ ಏರಿಕೆ ಕಂಡಿವೆ.

ಕಚ್ಚಾ ತೈಲ ದರ ಕುಸಿತ:ಜಾಗತಿಕವಾಗಿ ತೈಲ ದರ ಕುಸಿತ ಕಾಣುತ್ತಿದೆ. ಇಂದಿನ ದರದಲ್ಲಿ ಶೇಕಡಾ 0.01 ರಷ್ಟು ಕುಸಿದು ಬ್ಯಾರೆಲ್‌ಗೆ 75.41 ಡಾಲರ್​ಗೆ ಬಂದು ತಲುಪಿದೆ.

ವಿದೇಶಿ ಹೂಡಿಕೆ ಹೆಚ್ಚಳ:ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) 6,397.13 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿರುವುದು ದಾಖಲೆ ವಹಿವಾಟಿಗೆ ಕಾರಣವಾಗಿದೆ. ವಿದೇಶಿ ಬಂಡವಾಳ ನಿರಂತರ ಹೆಚ್ಚಾಗುತ್ತಿರುವುದೂ ಷೇರುಪೇಟೆ ಏರುಗತಿಗೆ ಕಾರಣವಾಗಿದೆ ಎಂಬುದು ವಿಶ್ಲೇಷಕರ ಅಭಿಮತ.

ಸೆನ್ಸೆಕ್ಸ್ ಜೂನ್ 22ರಂದು ತನ್ನ ಹಿಂದಿನ ಗರಿಷ್ಠ ದಾಖಲೆಯನ್ನು ಮೀರಿ 63,601.71 ಅಂಕಗಳನ್ನು ದಾಟುವ ಮೂಲಕ ದಾಖಲೆ ಬರೆದಿತ್ತು. ಇದು ಷೇರು ಮಾರುಕಟ್ಟೆಯ ಸಾರ್ವಕಾಲಿಕ ದಾಖಲೆಯಾಗಿತ್ತು. ಅದಾದ ಬಳಿಕ ಜೂನ್​ 28ರಂದು ಇದನ್ನೂ ಮೀರಿ 64050.44 ಅಂಕಗಳಿಗೆ ತಲುಪಿ ಹೊಸ ದಾಖಲೆ ನಿರ್ಮಿಸಿತ್ತು.

ಇದನ್ನೂ ಓದಿ: Stock Market: ಷೇರುಪೇಟೆಯಲ್ಲಿ ಹೂಂಕರಿಸಿದ ಗೂಳಿ: ಹೂಡಿಕೆದಾರರಿಗೆ ₹3 ಲಕ್ಷ ಕೋಟಿ ಲಾಭ!

ABOUT THE AUTHOR

...view details