ಮುಂಬೈ:ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಉತ್ತುಂಗಕ್ಕೇರಿದ್ದು, ಪ್ರಬಲ ಆರ್ಥಿಕತೆ ಬೆಂಬಲಿಸುವ ಆರ್ಥಿಕ ಕ್ರಮಗಳನ್ನು ಆರ್‌ಬಿಐ ಘೋಷಿಸಿದ ನಂತರ ಹಣಕಾಸು ಷೇರುಗಳ ಗಳಿಕೆಯಿಂದ ಸೆನ್ಸೆಕ್ಸ್ ಬುಧವಾರದ ವಹಿವಾಟಿನಂದು 424 ಅಂಕ ಜಿಗಿದಿದೆ.
ದಿನದ ಅಂತ್ಯದ ವೇಳೆಗೆ ಮುಂಬೈ ಸಂವೇದಿ ಷೇರು ಸೂಚ್ಯಂಕ ಸೆನ್ಸೆಕ್ಸ್ 424.04 ಅಂಕ ಅಥವಾ ಶೇ 0.88ರಷ್ಟು ಜಿಗಿದು 48,677.55 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸಂವೇದಿ ಷೇರು ಸೂಚ್ಯಂಕ ನಿಫ್ಟಿ 121.35 ಅಂಕ ಅಥವಾ ಶೇ 0.84ರಷ್ಟು ಏರಿಕೆ ಕಂಡು 14,617.85 ಅಂಕಗಳಿಗೆ ತಲುಪಿದೆ.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಸನ್ ಫಾರ್ಮಾ ಶೇ 6ರಷ್ಟು ಏರಿಕೆ ಕಂಡಿದ್ದು, ಕೊಟಕ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಡಾ. ರೆಡ್ಡೀಸ್, ಟೈಟಾನ್ ಮತ್ತು ಟಿಸಿಎಸ್ ನಂತರದ ಸ್ಥಾನಗಳಲ್ಲಿವೆ. ಮತ್ತೊಂದೆಡೆ ಬಜಾಜ್ ಫೈನಾನ್ಸ್, ಏಷ್ಯನ್ ಪೆಯಿಂಟ್ಸ್ ಮತ್ತು ಎಚ್‌ಯುಎಲ್ ಟಾಪ್ ಲೂಸರ್ಗಳಾದವು.
ದೇಶೀಯ ಷೇರುಗಳು ಮುಖ್ಯವಾಗಿ ಹಣಕಾಸು, ಐಟಿ ಮತ್ತು ಫಾರ್ಮಾದಿಂದ ಬೆಂಬಲಿತವಾಗಿದೆ. ಕೋವಿಡ್-19 ಬಿಕ್ಕಟ್ಟಿನ ಎರಡನೇ ಅಲೆಯಿಂದ ಬರುವ ಸವಾಲುಗಳನ್ನು ಎದುರಿಸಲು ಆರ್‌ಬಿಐ ಗವರ್ನರ್ ದ್ರವ್ಯತೆ ಬೆಂಬಲ ಘೋಷಿಸಿದ್ದು, ಹಣಕಾಸು ವಿಭಾಗದ ಷೇರುಗಳು ಮರುಚೇತರಿಕೆಗೆ ನೆರವಾಯಿತು ಎಂದು ರಿಲಯನ್ಸ್‌ನ ಮುಖ್ಯ ಕಾರ್ಯತಂತ್ರದ ಬಿನೋದ್ ಮೋದಿ ಹೇಳಿದರು.