ನವದೆಹಲಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಿಂದಾಗಿ ಕಳೆದ 18 ದಿನಗಳಿಂದ ಬೆಲೆ ಏರಿಕೆಯನ್ನು ತಡೆ ಹಿಡಿಯುವಲ್ಲಿ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಮುಂದಾಗಿದ್ದವು. ತಮ್ಮ ನಷ್ಟ ಸರಿದೂಗಿಸಿಕೊಳ್ಳಲು ಸತತ 2ನೇ ದಿನ ಚಿಲ್ಲರೆ ದರ ಏರಿಕೆ ಮಾಡಿವೆ.
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 19 ಪೈಸೆ ಮತ್ತು 21 ಪೈಸೆ ಏರಿಕೆಯಾಗಿದೆ. ಮಂಗಳವಾರವಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ದರ 15 ಪೈಸೆ ಹಾಗೂ 18 ಪೈಸೆ ಏರಿಕೆಯಾಗಿತ್ತು. 18 ದಿನಗಳ ವಿರಾಮದ ನಂತರ ಸತತ 2ನೇ ಏರಿಕೆಯಾಗಿದೆ.
ಬುಧವಾರದ ಹೆಚ್ಚಳದೊಂದಿಗೆ ಪೆಟ್ರೋಲ್ ಈಗ ಲೀಟರ್‌ಗೆ 90.74 ರೂ. ಮತ್ತು ಡೀಸೆಲ್ ಲೀಟರ್‌ಗೆ 81.12 ರೂ.ಯಲ್ಲಿ ಖರೀದಿ ಆಗುತ್ತಿದೆ. ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಆಯಾ ರಾಜ್ಯಗಳಲ್ಲಿನ ಸ್ಥಳೀಯ ತೆರಿಗೆ ಮಟ್ಟ ಅವಲಂಬಿಸಿ ಬದಲಾಗುತ್ತದೆ.
ಹೆಚ್ಚಿನ ಜಾಗತಿಕ ಕಚ್ಚಾ ಮತ್ತು ಉತ್ಪನ್ನದ ಬೆಲೆಗಳ ಹೊರತಾಗಿಯೂ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ದರ ಹಿಡಿದಿಟ್ಟುಕೊಂಡಿದ್ದ ಒಎಂಸಿಗಳು, ಚಿಲ್ಲರೆ ಬೆಲೆ ಹೆಚ್ಚಿಸಲು ಪ್ರಾರಂಭಿಸಬಹುದು ಎಂದು ಐಎಎನ್‌ಎಸ್ ಈ ಹಿಂದೆ ಹೇಳಿತ್ತು. ತೈಲ ಕಂಪನಿಗಳು ಈಗಾಗಲೇ ಎಟಿಎಫ್ ಬೆಲೆಯನ್ನು ಈ ತಿಂಗಳಿನಿಂದ ಶೇ 6.7ರಷ್ಟು ಹೆಚ್ಚಿಸಿವೆ.
ಒಎಂಸಿಗಳು ಚಿಲ್ಲರೆ ಇಂಧನ ಬೆಲೆಗಳನ್ನು ಜಾಗತಿಕ ಸಂಸ್ಕರಿಸಿದ ಉತ್ಪನ್ನಗಳ ಬೆಲೆಗಳು ಮತ್ತು ಡಾಲರ್ ವಿನಿಮಯ ದರದ 15 ದಿನಗಳ ಸರಾಸರಿ ಆಧರಿಸಿ ಪರಿಷ್ಕರಿಸಲಾಗುತ್ತದೆ.