ನವದೆಹಲಿ: ದೇಶದ ವಿವಿಧ ನಗರಗಳಲ್ಲಿ ಪ್ರತಿ ಕೆ.ಜಿ. ಈರುಳ್ಳಿ ದರ ಶತಕ ಬಾರಿಸಿದ್ದು, ಈಗ 150 ರೂ. ಗಡಿಗೆ ಬಂದು ನಿಂತಿದೆ.
ದೇಶದ ಪ್ರಮುಖ ಉತ್ಪಾದನಾ ಪ್ರದೇಶವಾದ ನಾಸಿಕ್‌ನಲ್ಲಿನ ಸಗಟು ಬೆಲೆಗಳು ಕಳೆದ ಎರಡು ದಿನಗಳಲ್ಲಿ ಪ್ರತಿ ಕ್ವಿಂಟಲ್‌ಗೆ 13,000 ರೂ. ಏರಿಕೆಯಾಗಿದೆ. ಕೆ.ಜಿ ಸಗಟು ಈರುಳ್ಳಿ ಬೆಲೆ 130 ರೂ. ತಲುಪಿದೆ. ಚಿಲ್ಲರೆ ದರದಲ್ಲಿ 150 ರೂ. ಸನಿಹದಲ್ಲಿ ಮಾರಾಟ ಆಗುತ್ತಿದೆ. ಬೆಲೆ ಏರಿಕೆಯಿಂದಾಗಿ ವ್ಯಾಪಾರಿಗಳು ಮತ್ತು ಜನ ಸಾಮಾನ್ಯರು ಭಯಪಡುವಂತಾಗಿದೆ.
ಈಗಾಗಲೇ ಮನೆಗಳಲ್ಲಿ ಈರುಳ್ಳಿಯನ್ನು ಮಿತವಾಗಿ ಬಳಸಲಾಗುತ್ತಿದೆ. ಹೋಟೆಲ್‌ಗಳು ಹೆಚ್ಚುವರಿ ಚೂರು ಈರುಳ್ಳಿಗೆ ಅಧಿಕ ಹಣ ವಿಧಿಸಲು ಆರಂಭಿಸಿವೆ. ಆತಂಕಕಾರಿಯಾಗಿ ಜಮೀನು ಮತ್ತು ಅಂಗಡಿಗಳಿಂದ ಈರುಳ್ಳಿ ಕಳ್ಳತನದ ಸುದ್ದಿ ಹರಿದಾಡುತ್ತಿವೆ.
ಪ್ರಮುಖ ಉತ್ಪಾದನಾ ಪ್ರದೇಶಗಳಾದ ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ತೆಲಂಗಾಣ, ಕರ್ನಾಟಕ ರಾಜ್ಯಗಳಲ್ಲಿ ಭಾರೀ ಮಳೆಯಾಗಿದ್ದು, ಪರಿಣಾಮ ಈರುಳ್ಳಿ ಇಳುವರಿ ಕಡಿಮೆಯಾಗಿದೆ. ಮಹಾರಾಷ್ಟ್ರದಲ್ಲಿ ಸರಾಸರಿ ಮಳೆಗಿಂತ ಒಂದೂವರೆ ಪಟ್ಟು ಹೆಚ್ಚಾಗಿದೆ. ಹೆಚ್ಚಿನ ಮಳೆಯಿಂದಾಗಿ ಈರುಳ್ಳಿ ಬೆಳೆಗಳಿಗೆ ವ್ಯಾಪಕ ಹಾನಿಯಾಗಿ ಅಕ್ಟೋಬರ್ ಮೊದಲ ವಾರದಲ್ಲಿ ಮಾರುಕಟ್ಟೆಗಳಿಗೆ ತಲುಪಬೇಕಿದ್ದ ಈರುಳ್ಳಿ ಫಸಲು ಜಮೀನಿನಲ್ಲೇ ಇದೆ.
ವಿಐಟಿ ವೆಲ್ಲೂರಿನ ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ. ಅಲ್ಲಿ ಪಿ. ಮಾತನಾಡಿ, ದೇಶದ ಸಂಪೂರ್ಣ ಈರುಳ್ಳಿ ಸರಬರಾಜು ಸರಪಳಿಯನ್ನು ನಮ್ಮ ಸಂಶೋಧನಾ ತಂಡ ಪತ್ತೆಹಚ್ಚಿದೆ. ಈರುಳ್ಳಿಯ ಬೆಲೆಗಳು 1998ರಿಂದ ಏರಿಳಿತವಾಗಲು ಆರಂಭಿಸಿದೆ. ಇದು ಕೇವಲ ಬೇಡಿಕೆ-ಪೂರೈಕೆ ನಿರ್ಬಂಧಗಳಿಂದ ಆಗುತ್ತಿಲ್ಲ. ಬದಲಿಗೆ ಮಧ್ಯವರ್ತಿಗಳ ಪ್ರಾಬಲ್ಯದಿಂದಲೂ ಸಂಭವಿಸುತ್ತಿದೆ. ಮಾರುಕಟ್ಟೆಗಳಲ್ಲಿ ಈರುಳ್ಳಿಯ ಆವಕಕ್ಕೂ ಬೆಲೆ ಏರಿಕೆಗೂ ಯಾವುದೇ ಸಂಬಂಧವಿಲ್ಲ. ಮುಖ್ಯ ಉತ್ಪಾದಕರಾಗಿರುವ ರೈತರು ಪ್ರತಿ ಕೆ.ಜಿ.ಗೆ 5ರಿಂದ10 ರೂ. ಮಾತ್ರ ಪಡೆಯುತ್ತಾರೆ. ಬಹುತೇಕ ಲಾಭವು ಚಿಲ್ಲರೆ ವ್ಯಾಪಾರಿಗಳ ಜೇಬಿಗೆ ಹೋಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಈರುಳ್ಳಿ ದಾಸ್ತಾನು ಮೇಲೆ ಮಿತಿ ಹೇರಿದೆ. ವಿದೇಶಗಳಿಂದ ಆಮದು ಮಾಡಿಕೊಳ್ಳಲು ಮುಂದಾಗಿದೆ. ಅಫ್ಘಾನಿಸ್ತಾನ, ಟರ್ಕಿ ಮತ್ತು ಈಜಿಫ್ಟ್ನಿಂದ 1.1 ಲಕ್ಷ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ಡಿಸೆಂಬರ್ ಅಂತ್ಯದಲ್ಲಿ ಇದು ಭಾರತದ ಮಾರುಕಟ್ಟೆಗೆ ಬರಲಿದೆ.