ನ್ಯೂಯಾರ್ಕ್: ಸಾಮಾಜಿಕ ಮಾಧ್ಯಮದ ದೈತ್ಯ ಸಂಸ್ಥೆ ಫೇಸ್‌ಬುಕ್‌ಗೆ ಭಾರಿ ಹೊಡೆತ ಬಿದ್ದಿದೆ. ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಫೇಸ್‌ಬುಕ್ ತನ್ನ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಆದಾಯವೂ ಕುಸಿದಿದೆ.
2021ರ ಡಿಸೆಂಬರ್‌ನ 3ನೇ ತ್ರೈಮಾಸಿಕಕ್ಕೆ ಫೇಸ್‌ಬುಕ್ ಬಳಕೆದಾರರ ಸಂಖ್ಯೆ 192.3 ಕೋಟಿಗೆ ಕುಸಿದಿದೆ. ಈ ಹಿಂದಿನ ತ್ರೈಮಾಸಿಕದಲ್ಲಿ 193 ಕೋಟಿ ಬಳಕೆದಾರರಿದ್ದರು ಎಂದು ಫೇಸ್‌ಬುಕ್ ಸಂಸ್ಥೆಯ ಮಾತೃಸಂಸ್ಥೆ ಮೆಟಾ ನೆಟ್ವರ್ಕ್ಸ್ ಮಾಹಿತಿ ಬಹಿರಂಗಪಡಿಸಿದೆ.
ಮೆಟಾ ನೆಟ್‌ವರ್ಕ್ಸ್‌ನ ಈ ಮಾಹಿತಿ ಷೇರುಪೇಟೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದ್ದು, ಬುಧವಾರ ಒಂದೇ ದಿನ ಫೇಸ್‌ಬುಕ್ ಷೇರುಗಳ ಮೌಲ್ಯ ಶೇ.25ರಷ್ಟು ಕುಸಿತ ಕಂಡಿದೆ. ಇದರಿಂದ ಕಂಪನಿಗೆ 16 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಟಿಕ್ಟಾಕ್, ಯೂಟ್ಯೂಬ್ ಸೇರಿದಂತೆ ಇತರ ಜಾಲತಾಣಗಳೊಂದಿಗೆ ಸ್ಪರ್ಧೆ ಹೆಚ್ಚಿರುವ ಹಿನ್ನೆಲೆಯಲ್ಲಿ ಎಫ್‌ಬಿಯ ಆದಾಯದಲ್ಲಿ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ. ಬಳಕೆದಾರರ ಸಂಖ್ಯೆ ಕಡಿಮೆಯಾಗುತ್ತಿರುವ ಪರಿಣಾಮ ಜಾಹೀರಾತುಗಳು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಕಂಪನಿ ಎಚ್ಚರಿಕೆ ನೀಡಿದೆ.
ಫೇಸ್‌ಬುಕ್‌ನ 16 ಲಕ್ಷ ಕೋಟಿ ರೂ. ಸಂಪತ್ತು ಕರಗಿ ಹೋದ ಹಿನ್ನೆಲೆಯಲ್ಲಿ ಇದರ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರ ವೈಯಕ್ತಿಕವಾಗಿ ನಿವ್ವಳ ಮೌಲ್ಯ ಆಸ್ತಿಯಲ್ಲಿ ಶೇ.23.34ರಷ್ಟು ಕಳೆದುಕೊಂಡಿದ್ದಾರೆ. ಆ ಮೂಲಕ 87.7 ಶತಕೋಟಿ ಡಾಲರ್ ಆಸ್ತಿಯೊಂದಿಗೆ ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ ಸೂಚ್ಯಂಕದಲ್ಲಿ 12ನೇ ಸ್ಥಾನಕ್ಕೆ ಕುಸಿದಿದ್ದಾರೆ. ಭಾರತದ ಉದ್ಯಮಿಗಳಾದ ಮುಖೇಶ್ ಅಂಬಾನಿ ಹಾಗೂ ಗೌತಮ್ ಅದಾನಿಯವರಿಗಿಂತ ಹಿಂದೆ ಉಳಿದಿದ್ದಾರೆ.
ಮೆಟಾ ಜಾಗತಿಕವಾಗಿ ಸುಮಾರು ಒಂದು ಮಿಲಿಯನ್ ದೈನಂದಿನ ಬಳಕೆದಾರರನ್ನು ಕಳೆದುಕೊಳ್ಳುತ್ತಿದೆ. ಅಮೆರಿಕ ಮತ್ತು ಕೆನಡಾದಲ್ಲಿ ಇದರ ಅತ್ಯಂತ ಲಾಭದಾಯಕ ಮಾರುಕಟ್ಟೆಗಳು ಸ್ಥಗಿತಗೊಂಡಿವೆ.