ಕರ್ನಾಟಕ

karnataka

ETV Bharat / business

ಕೊರೊನಾ ಲಾಕ್​ಡೌನ್​ಗೆ ಕೊಳೆಯುತ್ತಿರುವ ಪುಷ್ಪ: ಕೃಷಿಕರ ಬದುಕು ಮುದುಡಿಸಿದ ಹೂವಿನ ಕೃಷಿ - ಲಾಕ್​ಡೌನ್​ಗೆ ಹೂ ಕೃಷಿಕರು ತತ್ತರ

ಕಳೆದ ವರ್ಷ ಕೋವಿಡ್ ಮೊದಲನೇ ಅಲೆ ಬಂದ ನಂತರ ಲಾಕ್ ಡೌನ್ ಸಮಯದಲ್ಲಿ ಭಾರೀ ನಷ್ಟವಾಗಿ ರಾಜ್ಯದ ಹೂ ಬೆಳೆಗಾರರು, ತರಕಾರಿ ಬೆಳೆಗಾರರು, ಹಣ್ಣು ಬೆಳೆಗಾರರು ಭಾರೀ ನಷ್ಟ ಅನುಭವಿಸಿದ್ದರು. ಈ ವರ್ಷ ಕೊರೊನಾ ಎರಡನೇ ತಾಂಡವವಾಡುತ್ತಿದೆ. ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

Floriculture
Floriculture

By

Published : May 16, 2021, 3:08 AM IST

ಬೆಂಗಳೂರು:ಮಹಾಮಾರಿ ಕೊರೊನಾ ಎರಡನೇ ಅಲೆ ಎಲ್ಲವನ್ನು ಕಸಿದು ಕೊಂಡಿದ್ದು, ಮಾರುಕಟ್ಟೆಯಲ್ಲಿ ಹೂವನ್ನು ಕೇಳುವವರೇ ಇಲ್ಲದಂತಾಗಿದೆ.

ಕಳೆದ ವರ್ಷ ಕೋವಿಡ್ ಮೊದಲನೇ ಅಲೆ ಬಂದ ನಂತರ ಲಾಕ್ ಡೌನ್ ಸಮಯದಲ್ಲಿ ಭಾರೀ ನಷ್ಟವಾಗಿ ರಾಜ್ಯದ ಹೂ ಬೆಳೆಗಾರರು, ತರಕಾರಿ ಬೆಳೆಗಾರರು, ಹಣ್ಣು ಬೆಳೆಗಾರರು ಭಾರೀ ನಷ್ಟ ಅನುಭವಿಸಿದ್ದರು. ಈ ವರ್ಷ ಕೊರೊನಾ ಎರಡನೇ ತಾಂಡವವಾಡುತ್ತಿದೆ. ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಆನೇಕಲ್ ತಾಲೂಕಿನ ಸುತ್ತ ಮುತ್ತಲ ಗ್ರಾಮಗಳಲ್ಲಿ. ಅಲ್ಲದೆ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಕೆಲ ಭಾಗಗಳಲ್ಲಿ ದಶಕಗಳಿಂದಲೂ ನೂರಾರು ರೈತರು ಗುಲಾಬಿ, ಕನಕಾಂಬರ, ಚೆಂಡು ಹೂ, ಮಾರಿಗೋಲ್ಡ್ ಶಾಮಂತಿಗೆ ಹೂವನ್ನು ಬೆಳೆಯುತ್ತಾರೆ. ಆ ಕೃಷಿಯಿಂದಲೇ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ.

ಈ ಬಾರಿ ಉತ್ತಮ ಪುಷ್ಪ ಫಸಲು ಬಂದಿದ್ದು, ಆಂಧ್ರಪ್ರದೇಶ, ತಮಿಳುನಾಡಿಗೆ ಕಳುಹಿಸಲಾಗುತ್ತದೆ. ಕೆಲವರು ಬೆಂಗಳೂರಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಆದರೆ, ಕೊರೊನಾ ಎರಡನೇ ಅಲೆಯಿಂದ ರಾಜ್ಯದಲ್ಲಿ ಲಾಕ್​ಡೌನ್ ಘೋಷಿಸಿರುವುದರಿಂದ ಶುಭ ಸಮಾರಂಭಗಳು, ಧಾರ್ಮಿಕ ಕಾರ್ಯಗಳು ಮಾಡುವಂತಿಲ್ಲ. ಹೀಗಾಗಿ, ಗುಲಾಬಿ ಮತ್ತಿತರ ಹೂಗಳು ಮಾರಾಟವಾಗಿಲ್ಲ. ಇದರಿಂದ ಹೂ ಬೆಳೆಗಾರರು ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ.

ಇದೇ ಮೊದಲ ಬಾರಿಗೆ ಅರ್ಧ ಎಕರೆಯಲ್ಲಿ ಗುಲಾಬಿ ಹೂ ಬೆಳೆಯಲಾಗಿದೆ. ಉತ್ತಮವಾಗಿ ಫಸಲು ಸಹ ಬಂದಿದೆ. ಆದರೆ, ಹೂವನ್ನು ಕೇಳುವವರೇ ಇಲ್ಲ. ಒಂದು ಕೆ.ಜಿ. ಗುಲಾಬಿ ಹೂ 10 ರಿಂದ 20 ರೂ.ಗೆ ಮಾರಾಟವಾಗುತ್ತಿದೆ. ಬೆಳಗ್ಗೆ ಹೂ ಬಿಡಿಸಿ ಮಾರುಕಟ್ಟೆಗೆ ಕೊಂಡೊಯ್ಯಬೇಕು. ಆದರೆ, ಮಾರುಕಟ್ಟೆ ಬಂದ್ ಮಾಡಲಾಗಿದೆ. ದಿಕ್ಕೇ ತೋಚದಂತಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆ ರೈತ ದಿನೇಶ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮದುವೆ, ಗೃಹ ಪ್ರವೇಶದಂತಹ ಶುಭ ಸಮಾರಂಭಗಳ ಸೀಸನ್ ಆದ್ದರಿಂದ ಉತ್ತಮವಾಗಿ ಫಸಲು ಸಹ ಬಂದಿದೆ. ಆದರೆ ಲಾಕ್ ಡೌನ್​ನಿಂದಾಗಿ ಮದುವೆಗಳು ಸರಳವಾಗಿ ನಡೆಯುತ್ತಿರುವುದರಿಂದ ಬೇಡಿಕೆ ತೀವ್ರವಾಗಿ ಕುಸಿದಿದೆ. ಮಾರುಕಟ್ಟೆ ಇಲ್ಲದೆ ಹೂ ಕೊಳ್ಳುವವರು ಇಲ್ಲ. ಹೀಗಾಗಿ ಲಾಭದ ನಿರೀಕ್ಷೆಯಲ್ಲಿದ್ದ ರೈತರು ಈಗ ನಷ್ಟ ಅನುಭವಿಸುವಂತಾಗಿದೆ. ಹೂ ಖರೀದಿಸುವವರು ಇಲ್ಲದ ಕಾರಣ ಕೆಲವು ಕಡೆ ಗುಲಾಬಿ ಹೂ ಗಿಡಗಳನ್ನು ಕಡಿದು ಹಾಕಲಾಗುತ್ತಿದೆ. ಒಟ್ಟಾರೆ, ಕೊರೊನಾ ಮಾಹಾಮಾರಿ ತಡೆಗಟ್ಟಲು ಜಾರಿಗೆ ತಂದಿರುವ ಲಾಕ್ ಡೌನ್ ಎಫೆಕ್ಟ್ ಹೂ ಬೆಳೆಗಾರರಿಗೂ ತಟ್ಟಿದೆ. ಸಂಕಷ್ಟದಲ್ಲಿ ಇರುವ ಗುಲಾಬಿ ಬೆಳೆಗಾರರು ನೆರವಿಗಾಗಿ ಸರ್ಕಾರದತ್ತ ಕೈ ಚಾಚಿದ್ದು, ಗುಲಾಬಿ ಹೂ ಬೆಳೆಗಾರರ ಕೂಗಿಗೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕು.

ABOUT THE AUTHOR

...view details