ನವದೆಹಲಿ: ಕೊರೊನಾ ವೈರಸ್ ದೇಶಿ ಆರ್ಥಿಕತೆಯ ಮೇಲೆ ತಂದೊಡ್ಡಿರುವ ಸರಣಿ ಸವಾಲುಗಳಿಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಹಲವು ಉಳಿತಾಯಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ. ಇದನ್ನು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಟೀಕಿಸಿದ್ದಾರೆ.
ಬಡ್ಡಿದರದ ಕಡಿತದ ನಿರ್ಧಾರ ತಾಂತ್ರಿಕವಾಗಿ ಸರಿಯಾಗಿ ಇರಬಹುದಾದರೂ, ನೈಜವಾಗಿ ನೋಡಿದರೆ ಇಂತಹ ಕ್ರಮಕ್ಕೆ ಕೆಟ್ಟ ಸಮಯ ಇದಾಗಿದೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತೀವ್ರ ಸಂಕಷ್ಟದ ಮತ್ತು ಆದಾಯದ ಕುರಿತು ಅನಿಶ್ಚಿತತೆಯ ಸಮಯದಲ್ಲಿ ಜನರು ತಮ್ಮ ಉಳಿತಾಯದ ಮೇಲಿನ ಬಡ್ಡಿಯ ಆದಾಯವನ್ನು ಅವಲಂಬಿಸಿರುತ್ತಾರೆ. ಈ ಬಗ್ಗೆ ಸರ್ಕಾರ ತನ್ನ ನಿರ್ಧಾರವನ್ನು ತಕ್ಷಣ ಮರುಪರಿಶೀಲಿಸಬೇಕು. ಜೂನ್ 30ರ ವರೆಗೆ ಹಳೆಯ ಬಡ್ಡಿ ದರಗಳನ್ನು ಮುಂದುವರೆಸಬೇಕು ಎಂದು ತಿಳಿಸಿದ್ದಾರೆ.
ಕೆಲವೊಮ್ಮೆ ಸರ್ಕಾರ ಅವಿವೇಕಿ ಸಲಹೆಯ ಮೇರೆಗೆ ಕಾರ್ಯನಿರ್ವಹಿಸುತ್ತದೆ ಎಂಬುದು ನಮಗೆ ಗೊತ್ತಿದೆ. ಆದರೆ, ಈ ಸಲಹೆ ಎಷ್ಟು ಮೂರ್ಖತನದಾಗಿದೆ ಎಂದು ಆಶ್ಚರ್ಯ ಚಕಿತನಾಗಿದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ.
ಕಳೆದ ಮೂರು ತ್ರೈಮಾಸಿಕಗಳಲ್ಲಿ ಬೆಳವಣಿಗೆ ದರ ಕ್ರಮವಾಗಿ ಶೇ 5.6, ಶೇ 5.1 ಮತ್ತು ಶೇ 4.7ರಂಷ್ಟು ಕಂಡು, ನಂತರ 2019-20ನೇ ಸಾಲಿನ 4ನೇ ತ್ರೈಮಾಸಿಕ ನಿನ್ನೆ ಕೊನೆಗೊಂಡಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ವೃದ್ಧಿ ದರ ಶೇ 4ಕ್ಕಿಂತ ಹೆಚ್ಚಿರುವ ಸಾಧ್ಯತೆಯಿಲ್ಲ. 2019-20ರ ವಾರ್ಷಿಕ ಜಿಡಿಪಿ ಬೆಳವಣಿಗೆ ಶೇ 4.8ರಷ್ಟು ಇರುವುದು ನಿರಾಶಾದಾಯಕ ಆಗಿರಬಹುದು. ನಾವು ಈಗ ಬೆಳವಣಿಗೆಯ ಬಗ್ಗೆ ಚಿಂತಿಸಬೇಕಿಲ್ಲ. ಜನರ ಜೀವವನ್ನು ಉಳಿಸುವತ್ತ ಗಮನ ಹರಿಸಬೇಕು ಎಂದು ಚಿದಂಬರಂ ಹೇಳಿದ್ದಾರೆ.