ನವದೆಹಲಿ: ದ್ರವ್ಯತೆಯ ನಿಖರತೆ ಮತ್ತು ಆರ್ಥಿಕ ಬೆಳವಣಿಗೆ ಉತ್ತೇಜಿಸಲು ಕೇಂದ್ರೀಯ ಬ್ಯಾಂಕ್ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಉದ್ಯಮಿಗಳೀಗೆ ಅಭಯ ನೀಡಿದರು.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು ಐತಿಹಾಸಿಕ ಶೇ 23.9 ರಷ್ಟು ಕುಗ್ಗಿದೆ.
ಉದ್ಯಮಿ ಒಕ್ಕೂಟ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಫಿಕ್ಕಿ) ಆಯೋಜಿಸಿದ್ದ ವರ್ಚ್ಯುವಲ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ದಾಸ್, ಸರ್ಕಾರ ಬಿಡುಗಡೆ ಮಾಡಿದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ದತ್ತಾಂಶವು ಕೋವಿಡ್ -19ರ ವಿನಾಶದ ಪ್ರತಿಬಿಂಬವಾಗಿದೆ. ಆರ್ಥಿಕ ಚೇತರಿಕೆ ಇನ್ನೂ ಪರಿಪೂರ್ಣವಾಗಿ ಭದ್ರವಾಗಿಲ್ಲ. ಚೇತರಿಕೆ ಕ್ರಮೇಣ ಸುಧಾರಣೆ ಆಗುವ ಸಾಧ್ಯತೆ ಇದೆ ಎಂದರು.
ಚೇತರಿಕೆ ಇನ್ನೂ ಸಂಪೂರ್ಣವಾಗಿ ಏರಿಕೆ ಕಂಡುಬಂದಿಲ್ಲ. ಕೆಲವು ಕ್ಷೇತ್ರಗಳಲ್ಲಿ ಜೂನ್ ಮತ್ತು ಜುಲೈ ಮಾಸಿಕದಲ್ಲಿ ನಮ್ಮ ಗಮನಕ್ಕೆ ಬಂದಂತೆ ಸಮತಟ್ಟಾಗಿದೆ ಎಂಬಂತೆ ತೋರುತ್ತದೆ. ಎಲ್ಲ ಚೇತರಿಕೆಯು ಕ್ರಮೇಣ ಸುಧಾರಣೆ ಆಗುವ ಸಾಧ್ಯತೆ ಇದೆ. ಆರ್ಥಿಕತೆಯ ಪುನರಾರಂಭವು ಸೋಂಕು ಪ್ರಕರಣಗಳ ಏರಿಕೆಯನ್ನು ಎದುರಿಸುತ್ತಿದೆ ಎಂದು ಹೇಳಿದರು.
ಕೋವಿಡ್-19 ಪ್ರೇರಿತ ಬಿಕ್ಕಟ್ಟಿನಿಂದ ಹೊರಬರಲು ಉದ್ಯಮ ಮತ್ತು ವ್ಯವಹಾರಗಳಿಗೆ ನೆರವಾಗಲು ಆರ್‌ಬಿಐ ಯುದ್ಧೋಪಾದಿಯಲ್ಲಿ ಸನ್ನದ್ಧವಾಗಿದೆ. ಅಗತ್ಯವಿರುವ ಯಾವುದೇ ಕ್ರಮಗಳನ್ನು ಆರ್‌ಬಿಐ ತೆಗೆದುಕೊಳ್ಳುತ್ತದೆ ಎಂದು ಗವರ್ನರ್ ಉದ್ಯಮ ಒಕ್ಕೂಟಕ್ಕೆ ಭರವಸೆ ನೀಡಿದರು. ಸಾಂಕ್ರಾಮಿಕ ರೋಗವು ಜಾಗತಿಕ ಮಟ್ಟದಲ್ಲಿ ಸೃಷ್ಟಿಸಿದ ಹೊಸ ಅವಕಾಶಗಳ ಲಾಭ ಮಾಡಿಕೊಳ್ಳುವಂತೆ ಕರೆ ಕೊಟ್ಟರು.