ನವದೆಹಲಿ: ಜಗತ್ತಿನ ಆರ್ಥಿಕತೆಗೆ ಬಲವಾದ ಆಘಾತ ನೀಡಿರುವ ಕೊರೊನಾ ವೈರಸ್, ಅದನ್ನು ಆರ್ಥಿಕ ಹಿಂಜರಿಕೆಯತ್ತ ನೂಕಿದೆ. ಇಂತಹ ಆಘಾತಕರ ಪರಿಸ್ಥಿತಿಯಲ್ಲಿ ಪ್ರತಿರೋಧ ಲಸಿಕೆ ಸಹ ಆರ್ಥಿಕತೆಗೆ ಮಾರಕವೇ ಆಗಿದ್ದು- ಸ್ವಯಂ ನಿರ್ಬಂಧದಂತಹ ಮುನ್ನೆಚ್ಚರಿಕೆಯ ಕ್ರಮಗಳಿಂದಷ್ಟೇ ಈ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸಾಧ್ಯ.
ವೈರಸ್ ಹರಡದಂತೆ ಮಾಡಲು ಸುಮಾರು 130 ಕೋಟಿ ಜನರನ್ನು ಮನೆಯೊಳಗೇ ಇರುವಂತೆ ಹೇಳುವ ಮೂಲಕ ಬೃಹತ್ ಮಟ್ಟದ ತುರ್ತು ಪರಿಸ್ಥಿತಿಯೊಂದಕ್ಕೆ ಭಾರತ ಇದೀಗ ಕಾಲಿಡುತ್ತಿದೆ. ಇದರ ಮುನ್ನುಡಿಯಾಗಿ ವಿಮಾನಯಾನ, ಪ್ರಯಾಣ, ಮನರಂಜನೆ ಹಾಗೂ ಇನ್ನಿತರ ಚಟುವಟಿಕೆಗಳು ಹಾಗೂ ಸೇವೆಗಳಿಗೆ ಈ ತಿಂಗಳ ಪ್ರಾರಂಭದಲ್ಲಿಯೇ ನಿರ್ಬಂಧ ವಿಧಿಸಲಾಗಿತ್ತು.
ಕಳೆದ ಮೂರು ವರ್ಷಗಳಿಂದ ಆರ್ಥಿಕತೆ ನಿಧಾನಗತಿಯಲ್ಲಿಯೇ ಇತ್ತು. ಅದರ ಹಣಕಾಸು ವ್ಯವಸ್ಥೆ ದುರ್ಬಲವಾಗಿತ್ತಲ್ಲದೇ, ನಾಜೂಕಾಗಿತ್ತು. ಸರಕಾರ, ಖಾಸಗಿ ಹಣಕಾಸೇತರ ಮತ್ತು ಗೃಹವಲಯಗಳು ಸೇರಿದಂತೆ ಆರ್ಥಿಕತೆಯ ಎಲ್ಲಾ ಅಂಗಗಳು ಸಾಲದ ಒತ್ತಡಕ್ಕೆ ಸಿಲುಕಿದ್ದವು. ಇಂತಹ ಪರಿಸ್ಥಿತಿಯಲ್ಲಿ ಕೊರೊನಾ ವೈರಸ್‌ನಂತಹ ಆಘಾತ ಅಪ್ಪಳಿಸಿದೆ.
ಇದನ್ನು ಹದ್ದುಬಸ್ತಿನಲ್ಲಿಡುವ ಕ್ರಮವಾಗಿ ದೊಡ್ಡಮಟ್ಟದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದರಿಂದ ಉಂಟಾಗಿರುವ ಆರ್ಥಿಕ ನಷ್ಟ ದೊಡ್ಡ ಪ್ರಮಾಣದಲ್ಲಿದ್ದು, ಸದ್ಯಕ್ಕೆ ಊಹೆಗೂ ನಿಲುಕದಂಥದು. ಆದರೆ, ಈ ಹಿನ್ನಡೆ ಸದ್ಯಕ್ಕೆ ತೀರಾ ಆಳವಾಗಿದ್ದರೂ, ಪರಿಸ್ಥಿತಿ ಶೀಘ್ರದಲ್ಲಿಯೇ ನಿಯಂತ್ರಣಕ್ಕೆ ಬಂದರೆ ಈ ಪರಿಸ್ಥಿತಿ ಕೇವಲ ತಾತ್ಕಾಲಿಕ ಎಂದು ತಾರ್ಕಿಕವಾಗಿ ಊಹಿಸಲು ಅಡ್ಡಿ ಇಲ್ಲ ಅನಿಸುತ್ತದೆ.
ಸದ್ಯದ ಆರ್ಥಿಕ ಹಿಂಜರಿತವು ಮಾರಕ ರೋಗಾಣುವನ್ನು ನಿಯಂತ್ರಿಸುವ ಸರಕಾರಿ ಪ್ರೇಷಿತ ಕ್ರಮವಾಗಿರುವುದರಿಂದ, ಆರ್ಥಿಕತೆ V ಮಾದರಿಯಲ್ಲಿ ಮತ್ತೆ ಪುಟಿದೇಳುವ ಸಾಧ್ಯತೆಗಳು ದಟ್ಟವಾಗಿವೆ.
ಆದರೆ, ಒಂದು ವೇಳೆ ಸಾಂಕ್ರಾಮಿಕ ರೋಗದ ಅವಧಿ ವಿಸ್ತರಿಸುತ್ತ ಹೋದರೆ, ಅದರ ಜೊತೆಗೆ ಬಹುತೇಕ ಚಟುವಟಿಕೆಗಳು ಮತ್ತು ಸೇವೆಗಳು ಕೂಡಾ ವಿಳಂಬವಾಗುತ್ತ ಹೋಗುವುದರಿಂದ, ಆರ್ಥಿಕತೆಯು ದೊಡ್ಡ ಮಟ್ಟದಲ್ಲಿ ಧ್ವಂಸವಾಗಲಿದ್ದು, ಕೆಲವು ನಷ್ಟಗಳು ಶಾಶ್ವತವಾಗುವ ಸಾಧ್ಯತೆಯಿದೆ.
ಎನ್‌ಎಸ್‌ಎಸ್‌ಒ ಸಮೀಕ್ಷೆಯ ವರದಿಯಲ್ಲಿ ಈ ಅಂಶ ಪ್ರಧಾನ ಸ್ಥಾನ ಪಡೆದುಕೊಂಡಿದೆ. ಈ ವರದಿಯನ್ನು ಸರಕಾರ ಅಧಿಕೃತವಾಗಿ ಒಪ್ಪಿಕೊಂಡಿಲ್ಲವಾದರೂ, ಕಳೆದ ೪೫ ವರ್ಷಗಳಲ್ಲಿಯೇ ಅಧಿಕವಾಗಿದ್ದ ನಿರುದ್ಯೋಗವು ಭಾರತದಲ್ಲಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲಿದೆ ಎಂದು ಎರಡು ವರ್ಷಗಳ ಹಿಂದೆಯೇ ಹೇಳಲಾಗಿತ್ತು.
ಉದ್ದಿಮೆ ಸ್ಥಾವರಗಳು, ವ್ಯಾಪಾರ ಮತ್ತು ಹಲವಾರು ಸೇವೆಗಳು ಸ್ಥಗಿತವಾಗುವುದರ ಜೊತೆಗೆ ಇವುಗಳ ಪೈಕಿ ಹಲವಾರು ಕ್ಷೇತ್ರಗಳಲ್ಲಿ ಗ್ರಾಹಕ ಬೇಡಿಕೆ ಕುಸಿತವಾಗುವುದರಿಂದ ನಿರುದ್ಯೋಗದ ಮೇಲೆ ದುಪ್ಪಟ್ಟು ಪರಿಣಾಮವಾಗಲಿದೆ.
ದುರದೃಷ್ಟದ ಸಂಗತಿ ಎಂದರೆ, ಈ ಕ್ಷೇತ್ರದಲ್ಲಿ ಭಾರತ ನಿಜಕ್ಕೂ ಗಂಭೀರ ಸಂಕಷ್ಟದಲ್ಲಿದೆ. ಏಕೆಂದರೆ, ದೇಶದ ಐದರಲ್ಲಿ ಎರಡು ಭಾಗದ ಉದ್ಯೋಗ ಅನೌಪಚಾರಿಕವಾಗಿದ್ದು, ಈ ಪೈಕಿ ದೊಡ್ಡ ವಲಯಕ್ಕೆ ಸಂಬಂಧಿಸಿದ ಬಹುತೇಕ ಉದ್ಯೋಗಗಳು ಯಾವುದೇ ಲಿಖಿತ ಒಪ್ಪಂದಕ್ಕೆ ಒಳಪಟ್ಟಿರುವುದಿಲ್ಲ (ಉದಾಹರಣೆಗೆ, ಮನೆಕೆಲಸದವರು, ದಿನಗೂಲಿ ಕಾರ್ಮಿಕರು, ಇತ್ಯಾದಿ); ಸ್ವಉದ್ಯೋಗಿಗಳ ಪೈಕಿ ಬಹುತೇಕರು ಅಲ್ಪ ಉತ್ಪಾದನಾ ಸೇವೆಗಳನ್ನು ಒದಗಿಸುವಂಥವರು (ಉದಾಹರಣೆಗೆ, ಹೊತ್ತು ಮಾರುವವರು, ಚಿಲ್ಲರೆ ವ್ಯಾಪಾರಿಗಳು, ದುರಸ್ತಿಗಾರರು ಹಾಗೂ ವೈಯಕ್ತಿಕ ಸೇವೆಗಳನ್ನು ನೀಡುವವರು); ದೇಶದ ಒಟ್ಟು ಉತ್ಪಾದನೆಯ ಶೇಕಡಾ 54 ಭಾಗ ಬರುವುದೇ ಇಂತಹ ಸೇವೆಗಳಿಂದ.
ಆರ್ಥಿಕ ಚಟುವಟಿಕೆಗಳ ಸ್ಥಗಿತತೆಯ ಪರಿಣಾಮ ಇಂತಹ ಕೆಲಸಗಳ ಮೇಲೆ ಅಪಾರ. ಏಕೆಂದರೆ, ಉದ್ಯೋಗವು ಗುತ್ತಿಗೆ ಆಧರಿತವಾಗಿದ್ದರೂ ದಿನಗೂಲಿ ನೌಕರರ ಪೈಕಿ ಬಹುತೇಕರು ದಿನಗೂಲಿಯ ಮೇಲೆ ಅವಲಂಬಿತರಾಗಿರುತ್ತಾರೆ. ಅಲ್ಲದೇ ಕೆಲಸಗಳ ಪೈಕಿ ಹೆಚ್ಚಿನ ಭಾಗವು ಅಂತರ್ಗತವಾಗಿ ದುರ್ಬಲವಾಗಿರುವ ಸಣ್ಣ ಮತ್ತು ಮಧ್ಯಮಗಾತ್ರದ ಉದ್ದಿಮೆಗಳಲ್ಲಿರುತ್ತದೆ.
ಕೋವಿಡ್-19 ವಿರುದ್ಧದ ಹೋರಾಟವು ಇಂತಹ ಗಂಭೀರ ಮತ್ತು ಪ್ರತಿಕೂಲ ಉದ್ಯೋಗದ ಪರಿಣಾಮಗಳನ್ನು ಹೆಚ್ಚಿಸುತ್ತದೆ. ಇದರ ತಕ್ಷಣದ ಪರಿಣಾಮವಾಗುವುದು ದಿನಗೂಲಿ ನೌಕರರ ಆದಾಯದ ಮೇಲೆ. ಅವರೇ ಹೆಚ್ಚಿನ ಪ್ರಮಾಣದಲ್ಲಿ ಬಾಧಿತರಾಗುತ್ತಿರುವುದು.