ನ್ಯೂಯಾರ್ಕ್:ರಾಷ್ಟ್ರೀಯ ಭದ್ರತೆ ಮತ್ತು ಸೆನ್ಸಾರ್ಶಿಪ್ ಕಾಳಜಿ ಮುಂದಿಟ್ಟುಕೊಂಡು ಚೀನಾದ ಜನಪ್ರಿಯ ವಿಡಿಯೊ ಆ್ಯಪ್ ಟಿಕ್‌ಟಾಕ್ ವಿರುದ್ಧ ತಮ್ಮ ಆಡಳಿತ ಕ್ರಮ ಕೈಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಭಾರತದಲ್ಲಿ ಭದ್ರತೆ ಹಾಗೂ ಇತರೆ ನಿಯಮಗಳ ಉಲ್ಲಂಘನೆಯ ಕಾರಣಕ್ಕೆ ಕೇಂದ್ರ ಸರ್ಕಾರ ಚೀನಾ ಮೂಲದ ಹಲವು ಆ್ಯಪ್ಗಳನ್ನು ನಿಷೇಧಿಸಿದೆ. ಇದೇ ಹಾದಿಯಲ್ಲಿ ಅಮೆರಿಕ ಸಾಗುತ್ತಿದೆ.
ಟಿಕ್‌ಟಾಕ್ ಮಾರಾಟ ಮಾಡಲು ಚೀನಾದ ಬೈಟ್‌ಡ್ಯಾನ್ಸ್‌ಗೆ ಆದೇಶ ನೀಡಲು ಆಡಳಿತವು ಯೋಜಿಸುತ್ತಿದೆ ಎಂಬ ಪ್ರಕಟಿತ ವರದಿಗಳ ನಂತರ ಟ್ರಂಪ್‌ರ ಈ ಹೇಳಿಕೆ ಹೊರ ಬಂದಿದೆ. ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್, ಆ ಆ್ಯಪ್ ಖರೀದಿಸಲು ಮಾತುಕತೆ ನಡೆಸುತ್ತಿದೆ ಎಂದು ಶುಕ್ರವಾರ ವರದಿಗಳು ಬಂದಿದ್ದವು.
ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ನ್ಯೂಸ್ ಮತ್ತು ವಾಲ್ ಸ್ಟ್ರೀಟ್ ಜರ್ನಲ್ ವರದಿಗಳು, ಟಿಕ್‌ಟಾಕ್‌ನಲ್ಲಿ ಅದರ ಮಾಲೀಕತ್ವವನ್ನು ಬೇರೆಡೆಗೆ ತಿರುಗಿಸಲು ಬೈಟ್‌ಡ್ಯಾನ್ಸ್‌ಗೆ ಆದೇಶ ನೀಡುವ ನಿರ್ಧಾರವನ್ನು ಆಡಳಿತ ಮಂಡಳಿಯು ಶೀಘ್ರದಲ್ಲೇ ಪ್ರಕಟಿಸಬಹುದು ಎಂದು ಹೇಳಿದೆ.
ಟ್ರಂಪ್ ಆಡಳಿತವು ಅಪ್ಲಿಕೇಶನ್ ಮೇಲೆ ಕಣ್ಣಿಟ್ಟಿದ್ದು, ಅಮೆರಿಕದ ಟೆಕ್ ದೈತ್ಯರು ಮತ್ತು ಹಣಕಾಸು ಸಂಸ್ಥೆಗಳು ಟಿಕ್‌ಟಾಕ್‌ನಲ್ಲಿ ಷೇರು ಖರೀದಿಸಲು ಅಥವಾ ಹೂಡಿಕೆ ಮಾಡಲು ಆಸಕ್ತಿ ವಹಿಸಿವೆ ಎಂಬ ವರದಿಗಳು ಬಂದಿವೆ. ಟಿಕ್‌ಟಾಕ್ ಖರೀದಿಸಲು ಮೈಕ್ರೋಸಾಫ್ಟ್ ಮಾತುಕತೆ ನಡೆಸುತ್ತಿದೆ ಎಂದು ಅಪರಿಚಿತ ಮೂಲವೊಂದನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ಮತ್ತು ಫಾಕ್ಸ್ ಬಿಸಿನೆಸ್ ಶುಕ್ರವಾರ ವರದಿ ಮಾಡಿದೆ. ಮೈಕ್ರೋಸಾಫ್ಟ್ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.