ನವದೆಹಲಿ:ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಕಡ್ಡಾಯವಾಗಿ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ದೆಹಲಿ ವಿಶ್ವವಿದ್ಯಾಲಯ ಶಿಕ್ಷಕರ ಸಂಘದ (ಡಿಯುಟಿಎ) ಸದಸ್ಯರು ನಡೆಸುತ್ತಿರುವ ಪ್ರತಿಭಟನೆ ಕೊನೆಗೂ ಫಲ ನೀಡಿದೆ.
ವಿಶ್ವವಿದ್ಯಾಲಯ, ಕಾಲೇಜುಗಳ ಮತ್ತು ಇತರ ಶೈಕ್ಷಣಿಕ ಸಿಬ್ಬಂದಿ ನೇಮಕಾತಿಯ ಕನಿಷ್ಠ ಅರ್ಹತೆಗಳ ಕುರಿತು ವಿಶ್ವವಿದ್ಯಾನಿಲಯ ಅನುದಾನ ಆಯೋಗವು (ಯುಜಿಸಿ) ತನ್ನ ನಿಯಮಗಳಿಗೆ ತಿದ್ದುಪಡಿ ಮಾಡಬಹುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯ ತಿಳಿಸಿದೆ.
ಮುಷ್ಕರ ನಿರತ ಶಿಕ್ಷಕ ಸಂಘಟನೆಯ ಪದಾಧಿಕಾರಿಗಳೊಂದಿಗೆ ಹೆಚ್ಆರ್ಡಿ ಸಚಿವಾಲಯದ ಅಧಿಕಾರಿಗಳು ಸಭೆ ನಡೆಸಿ ತಾತ್ಕಾಲಿಕ ಉಪನ್ಯಾಸಕರ ನೇಮಕಾತಿಯನ್ನು ಹಿಂದಕ್ಕೆ ತೆಗೆದುಕೊಳ್ಳಬಹುದು. ಶೈಕ್ಷಣಿಕ ವಿಭಾಗದ ವಿವಿಧ ಶ್ರೇಣಿಯ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ತರಬಹುದು ಎಂದು ಹೇಳಿದ್ದಾರೆ.
ಮಾನವ ಸಂಪನ್ಮೂಲ ಸಚಿವಾಲಯವು ವಿಶ್ವವಿದ್ಯಾಲಯದ ಉಪಕುಲಪತಿ, ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಇದಾದ ಕೆಲ ದಿನಗಳಲ್ಲಿ ಸಚಿವಾಲಯ ಮತ್ತು ಯುಜಿಸಿ ಅಧಿಕಾರಿಗಳು ಡಿಯುಟಿ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ವಿಶ್ವವಿದ್ಯಾಲಯಗಳ ಮತ್ತು ಕಾಲೇಜುಗಳ ಉಪನ್ಯಾಸಕರ ಮತ್ತು ಇತರ ಶೈಕ್ಷಣಿಕ ಸಿಬ್ಬಂದಿ ನೇಮಕಕ್ಕೆ ಕನಿಷ್ಠ ಅರ್ಹತೆ ಕುರಿತು ಯುಜಿಸಿ ನಿಯಮಗಳು ಹಾಗೂ ಉನ್ನತ ಶಿಕ್ಷಣ 2018ರ ಮಾನದಂಡಗಳ ನಿರ್ವಹಣೆಯ ಕ್ರಮಗಳಿಗೆ ತಿದ್ದುಪಡಿ ಮಾಡಬಹುದು ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.