ಮುಂಬೈ: ವಸತಿ ರಹಿತ ಪ್ರದೇಶಗಳಲ್ಲಿ ಮಳಿಗೆಗಳು, ಶಾಪಿಂಗ್ ಮಾಲ್ ಹಾಗೂ ಪಬ್ಗಳು 24x7 ತೆರೆಯಲು ಅನುಮತಿ ನೀಡಲು 'ಮುಂಬೈ 24 ಗಂಟೆ ಕಾಯ್ದೆ'ಗೆ ಮಹಾರಾಷ್ಟ್ರ ಸಚಿವ ಸಂಪುಟವು ಅಂಗೀಕಾರ ನೀಡಿದೆ.
ಲಂಡನ್‌ನಲ್ಲಿ ರಾತ್ರಿ ವೇಳೆಯ ವ್ಯಾಪಾರ ಚಟುವಟಿಕೆಳಿಂದ ಐದು ಶತಕೋಟಿ ಪೌಂಡ್ ಮೌಲ್ಯದಷ್ಟು ವಹಿವಾಟು ನಡೆಯುತ್ತಿದೆ. ಮುಂಬೈನಲ್ಲಿಯೂ ಅದೇ ರೀತಿಯ ವ್ಯಾಪಾರ ವಹಿವಾಟು ಎಂಬ ನಡೆಯಿಂದ ಈ ತೀರ್ಮಾನಕ್ಕೆ ಬರಲಾಗಿದೆ. ಸಚಿವ ಸಂಪುಟದ ಈ ನಿರ್ಧಾರವು ಹೆಚ್ಚಿನ ಆದಾಯಕ್ಕೆ ಹಾಗೂ ಉದ್ಯೋಗ ಸೃಷ್ಟಿಗೆ ನೆರವಾಗಲಿದೆ. ಹೆಚ್ಚುವರಿಯಾಗಿ 5 ಲಕ್ಷ ಜನರು ಸೇವಾ ವಲಯದಲ್ಲಿ ಕೆಲಸ ಪಡೆಯುವಂತಾಗಲಿದೆ ಎಂದು ಸಚಿವ ಸಂಪುಟದ ಸಭೆಯ ಬಳಿಕ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಹೇಳಿದ್ದಾರೆ.
ಅಂಗಡಿ ಮತ್ತು ಮಾಲ್‌ಗಳು ರಾತ್ರಿಯಲ್ಲಿ ತೆರೆದಿರುವುದು ಕಡ್ಡಾಯವಲ್ಲ. ಮುಕ್ತವಾಗಿರಲು ಬಯಸಿದರೆ ಅದು ವ್ಯಾಪಾರಿಗಳಿಗೆ ಬಿಟ್ಟ ವಿಚಾರ. ರಾತ್ರಿ ವೇಳೆಯು ಉತ್ತಮ ವಹಿವಾಟು ನಡೆಸಬಹುದು ಎಂದುಕೊಂಡವರು ಮಳಿಗೆಗಳನ್ನು ತೆರೆದು ವ್ಯಾಪಾರ ನಡೆಸಬಹುದು. ಇದರಲ್ಲಿ ಯಾವುದೇ ಬಲವಂತವಿಲ್ಲ ಎಂದರು.
ಎನ್‌ಸಿಪಿಎ ಬಳಿಯ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಮತ್ತು ನಾರಿಮನ್ ಪಾಯಿಂಟ್‌ನಲ್ಲಿ ಆಹಾರ ಟ್ರಕ್‌ಗಳಿಗಾಗಿ ಒಂದು ಲೇನ್ ತೆರೆಯಲಾಗುವುದು. ಆಹಾರ ನಿರೀಕ್ಷಕರು ಅವುಗಳ ಮೇಲೆ ನಿಗಾ ಇರಿಸಿರುತ್ತಾರೆ. ಘನತ್ಯಾಜ್ಯ ನಿರ್ವಹಣೆ, ತ್ಯಾಜ್ಯ ಮಿತಿ ಮತ್ತು ಕಾನೂನು ಸುವ್ಯವಸ್ಥೆ ನಿಯಮಗಳನ್ನು ಉಲ್ಲಂಘಿಸಿದರೆ ಅಜೀವ ಪರ್ಯಂತ ನಿಷೇಧ ವಿಧಿಸಲಾಗುವುದು ಎಂದು ಸಚಿವ ಆದಿತ್ಯ ಠಾಕ್ರೆ ತಿಳಿಸಿದ್ದಾರೆ.