ನವದೆಹಲಿ/ ಲಂಡನ್: ಇಂಗ್ಲೆಂಡ್ನಲ್ಲಿ ಜಾಮೀನಿನ ಮೇಲೆ ಉಳಿದುಕೊಂಡಿರುವ ಮದ್ಯದ ಉದ್ಯಮಿ ವಿಜಯ್ ಮಲ್ಯ ಅವರ ಭಾರತಕ್ಕೆ ಹಸ್ತಾಂತರ ಇನ್ನೂ ಸ್ವಲ್ಪ ದಿನಗಳ ಕಾಲ ವಿಳಂಬವಾಗಬಹುದು ಎನ್ನಲಾಗುತ್ತಿದೆ.
ಹಸ್ತಾಂತರ ಪ್ರಕ್ರಿಯೆ ತಡೆಯಲು ಮಲ್ಯ ತನ್ನೆಲ್ಲ ರೀತಿಯ ಪ್ರಭಾವಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಸಭೆಯ ಮಾಜಿ ಸದಸ್ಯರಾಗಿರುವ ಮಲ್ಯ, ಯುಕೆಯಲ್ಲಿ ರಾಜಕೀಯ ಆಶ್ರಯ ಪಡೆಯುವ ಸಾಧ್ಯತೆ ಬಗ್ಗೆ ತನಿಖಾ ಸಂಸ್ಥೆಗಳಿಗೆ ತಿಳಿದಿದೆ. ಈ ಬಗ್ಗೆ ತಮ್ಮಲ್ಲಿ ಮಾಹಿತಿ ಇದೆ ಎಂದು ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಯುಕೆ ಈ ವಿಷಯದಲ್ಲಿ ಔಪಚಾರಿಕ ಹಸ್ತಾಂತರ ಆದೇಶವನ್ನ ಹೊರಡಿಸಿಲ್ಲ. ಮಲ್ಯ ಅವರನ್ನು ಹಸ್ತಾಂತರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ದೇಶದಿಂದ ಪರಾರಿಯಾದ ಮಲ್ಯ ಅವರಿಗೆ ಭಾರತಕ್ಕೆ ಹಸ್ತಾಂತರದಿಂದ ತಪ್ಪಿಸಿಕೊಳ್ಳಲು ಕಾನೂನಿನಡಿ ಅವಕಾಶವೂ ಇದೆ ಎನ್ನಲಾಗುತ್ತಿದೆ.
ವಿಜಯ್ ಮಲ್ಯ ಅವರ ಹಸ್ತಾಂತರ ಈಗ ನಡೆಯುತ್ತಿಲ್ಲ. ಒಮ್ಮೆ ಯುಕೆ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡರೆ ನಾವು ಅದನ್ನು ಪರಿಶೀಲಿಸುತ್ತೇವೆ ಮತ್ತು ಎಲ್ಲರಿಗೂ ತಿಳಿಸುತ್ತೇವೆ ಎಂದು ಸಿಬಿಐನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.