ನವದೆಹಲಿ: ದೇಶದ 23 ರಾಜ್ಯಗಳ ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಉದ್ಯೋಗಗಳ ನೇಮಕಾತಿಗೆ ಸಂದರ್ಶನವನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ.
2016ರಿಂದ ಕೇಂದ್ರ ಸರ್ಕಾರದ ಗ್ರೂಪ್-ಬಿ (ನಾನ್ ಗೆಜೆಟೆಡ್) ಮತ್ತು ಗ್ರೂಪ್-ಸಿ ಹುದ್ದೆಗಳ ಸಂದರ್ಶನ ರದ್ದುಪಡಿಸಿರುವುದನ್ನು ಜಾರಿಗೊಳಿಸಲು ಕೈಗೊಂಡ ಕ್ರಮ ಇದಾಗಿದೆ ಎಂದು ಹೇಳಿದರು.
ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಜಾರಿ ಮಾಡಿರುವ ಕೆಲವು ಮಹತ್ವದ ಸುಧಾರಣೆಗಳ ಬಗ್ಗೆ ಡಾ.ಜಿತೇಂದ್ರ ಸಿಂಗ್ ವಿವರಿಸಿ, 2015ರ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂದರ್ಶನವನ್ನು ರದ್ದುಗೊಳಿಸಿ ಲಿಖಿತ ಪರೀಕ್ಷೆಯ ಆಧಾರದ ಮೇಲೆ ಉದ್ಯೋಗಗಳಿಗೆ ಆಯ್ಕೆ ನಡೆಯಬೇಕು ಎಂದಿದ್ದರು. ಅವರ ಸಲಹೆಯನ್ನು ತ್ವರಿತವಾಗಿ ಪಾಲಿಸಿದ ಡಿಒಪಿಟಿಯು ಶೀಘ್ರ ಕ್ರಮ ಕೈಗೊಂಡಿತು ಮತ್ತು ಕೇಂದ್ರ ಸರ್ಕಾರದ ನೇಮಕಾತಿಗಾಗಿ ಸಂದರ್ಶನವನ್ನು ರದ್ದುಪಡಿಸುವ ಘೋಷಣೆಯ ಸಂಪೂರ್ಣ ಪ್ರಕ್ರಿಯೆಯನ್ನು ಮೂರೇ ತಿಂಗಳಲ್ಲಿ ಪೂರ್ಣಗೊಳಿಸಿ 2016ರ ಜನವರಿ 1ರಿಂದ ಜಾರಿಗೆ ತಂದಿದೆ ಎಂದು ವಿವರಿಸಿದರು.
ಮಹಾರಾಷ್ಟ್ರ ಮತ್ತು ಗುಜರಾತ್‌ನಂತಹ ಕೆಲವು ರಾಜ್ಯಗಳು ಈ ನಿಯಮವನ್ನು ತ್ವರಿತಗತಿಯಲ್ಲಿ ಜಾರಿಗೆ ತಂದವು. ಆದರೆ ಕೆಲವು ರಾಜ್ಯಗಳು ಸಂದರ್ಶನವನ್ನು ರದ್ದುಗೊಳಿಸಲು ಹಿಂಜರಿಯುತ್ತಿದ್ದವು ಎಂದರು.
ರಾಜ್ಯ ಸರ್ಕಾರಗಳ ಮನವೊಲಿಸುವಿಕೆ ಮತ್ತು ಪುನರಾವರ್ತಿತ ಜ್ಞಾಪನೆಗಳ ನಂತರ, ಇಂದು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಸೇರಿದಂತೆ ಭಾರತದ ಎಲ್ಲಾ 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತ್ತು ದೇಶದ 28 ರಾಜ್ಯಗಳ ಪೈಕಿ 23ರಲ್ಲಿ ಸಂದರ್ಶನ ರದ್ದುಪಡಿಸಲಾಗಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಈ ಹಿಂದೆ ಸಂದರ್ಶನದಲ್ಲಿ ಕೆಲವು ಅಭ್ಯರ್ಥಿಗಳಿಗೆ ಸಹಾಯ ಮಾಡಲು ಅಂಕಗಳನ್ನು ನೀಡಲಾಗುತ್ತಿರುವ ಬಗ್ಗೆ ದೂರುಗಳು ಮತ್ತು ಆರೋಪಗಳು ಇದ್ದವು. ಸಂದರ್ಶನವನ್ನು ರದ್ದುಪಡಿಸುವುದರಿಮದ ಮತ್ತು ಲಿಖಿತ ಪರೀಕ್ಷೆಯ ಅಂಕಗಳನ್ನು ಮಾತ್ರ ಆಯ್ಕೆಗೆ ಅರ್ಹತೆ ಎಂದು ಪರಿಗಣಿಸುವುದರಿಂದ ಎಲ್ಲಾ ಅಭ್ಯರ್ಥಿಗಳಿಳಿಗೂ ನ್ಯಾಯ ದೊರೆಯುತ್ತದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು.
ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ವಸ್ತುನಿಷ್ಠತೆಯನ್ನು ತರುವ ಜೊತೆಗೆ, ಹಲವಾರು ರಾಜ್ಯಗಳು ತಮ್ಮ ವೆಚ್ಚದಲ್ಲೂ ಭಾರಿ ಉಳಿತಾಯ ಮಾಡಿವೆ. ಏಕೆಂದರೆ ಸಾವಿರಾರು ಸಂಖ್ಯೆಯ ಅಭ್ಯರ್ಥಿಗಳ ಸಂದರ್ಶನ ಪ್ರಕ್ರಿಯೆಯನ್ನು ಹಲವಾರು ದಿನಗಳವರೆಗೆ ನಡೆಸುತ್ತಿದ್ದುದರಿಂದ ರಾಜ್ಯಗಳಿಗೆ ಸಾಕಷ್ಟು ವೆಚ್ಚ ತಗುಲುತ್ತಿತ್ತು. ಕೆಲವು ಅಭ್ಯರ್ಥಿಗಳಿಗೆ ಸಹಾಯ ಮಾಡುವ ಸಲುವಾಗಿ ಅಭ್ಯರ್ಥಿಯ ಸಂದರ್ಶನದ ಅಂಕಗಳನ್ನು ಕಡಿಮೆ ಮಾಡುವ ಮೂಲಕ ಲಿಖಿತ ಪರೀಕ್ಷೆಯ ಅರ್ಹತೆಯನ್ನೇ ನಗಣ್ಯ ಮಾಡುವ ಬಗ್ಗೆ ದೂರುಗಳು ಬಂದಿದ್ದವು. ಸಂದರ್ಶನದಲ್ಲಿ ಹೆಚ್ಚು ಅಂಕಗಳನ್ನು ಪಡೆದು, ಉದ್ಯೋಗವನ್ನು ಖಾತ್ರಿಪಡಿಸಿಕೊಳ್ಳಲು ಅಥವಾ ಭಾರಿ ಹಣವನ್ನೂ ಪಾವತಿಸಲಾಗುತ್ತಿದೆ ಎಂಬ ಆರೋಪವೂ ಇತ್ತು.