ನವದೆಹಲಿ:ಕೊರೊನಾ ವೈರಸ್ ವಿಶ್ವ ಆರ್ಥಿಕತೆಯನ್ನು ಮಾರಕವಾಗಿ ಕಾಡುತ್ತಿದೆ. ಭಾರತದ ಹಲವು ಉದ್ಯಮಗಳ ಬೆಳವಣಿಗೆ ಈಗಾಗಲೇ ನೆಲಕಚ್ಚಿವೆ. ಸರ್ಕಾರ ನಿತ್ಯ ಒಂದಲ್ಲಾ ಒಂದು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ ಚೇತರಿಕೆ ಕಾಣುತ್ತಿಲ್ಲ. ಈ ನಡುವೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಕೇಂದ್ರ ಸಲಹೆ ಒಂದನ್ನು ನೀಡಿ ಟ್ವೀಟ್ ಮಾಡಿದ್ದಾರೆ.
ಕೊರೊನಾ ವೈರಸ್ ಅನ್ನು ನಿಭಾಯಿಸಲು ತ್ವರಿತ ಆಕ್ರಮಣಕಾರಿ ಕ್ರಮವೇ ಸೂಕ್ತವಾದ ಉತ್ತರವಾಗಿದೆ. ನಮ್ಮ ಸರ್ಕಾರಗಳು ನಿರ್ಣಾಯಕವಾಗಿ ಕಾರ್ಯನಿರ್ವಹಿಸಲು ಅಸಮರ್ಥ ಆಗಿರುವುದರಿಂದ ಭಾರತವು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮೂಡಿಸ್ ಅಥವಾ ಎಸ್ಆ್ಯಂಡ್ಪಿ ಅಥವಾ ಟ್ರಂಪ್ ಏನು ಹೇಳುತ್ತಾರೆಂದು ಪ್ರಧಾನ ಮಂತ್ರಿ ಅವರು ಹೆಚ್ಚು ಕಾಳಜಿ ವಹಿಸುತ್ತಾರೆ. ಅವರು ಏನು ಹೇಳುತ್ತಾರೆಂದು ನನಗೆ ಕಾಳಜಿಯಿಲ್ಲ. ಆದರೆ, ಪ್ರಧಾನಿ ಅದರಿಂದ ಹೊರಗೆ ಬಂದು ಏನಾದರೂ ಮಾಡಬೇಕು. ಆದರೆ, ಪ್ರಧಾನಿ ಮರಳಿನಲ್ಲಿ ತಲೆ ಹಾಕಿದ್ದಾರೆ ಮತ್ತು ಸಮಸ್ಯೆಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ನಿನ್ನೆ (ಮಂಗಳವಾರ) ವ್ಯಂಗ್ಯವಾಡಿದ್ದರು. ಈಗ ಮತ್ತೊಂದು ಹೇಳಿಕೆ ನೀಡಿದ್ದಾರೆ.
ಸೋಮವಾರ ಕೂಡ ಭಾರತದ ಆರ್ಥಿಕತೆಯನ್ನು ಮುಂದಿಟ್ಟುಕೊಂಡು, 'ಭಾರತೀಯ ಆರ್ಥಿಕತೆಯು ಬಹಳ ಕಷ್ಟದ ಅವಧಿಯಲ್ಲಿ ಸಾಗುತ್ತಿದೆ. ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯು ಪ್ರಾಯೋಗಿಕವಾಗಿ ಇನ್ನು ಮುಂದೆ ಕಾರ್ಯನಿರ್ವಹಿಸುತ್ತಿಲ್ಲ. ಬ್ಯಾಂಕ್ಗಳು ವಿಫಲವಾಗುತ್ತಿವೆ. ಪ್ರಸ್ತುತ ಜಾಗತಿಕ ಪರಿಸ್ಥಿತಿಯ ಪರಿಣಾಮವಾಗಿ ಇನ್ನೂ ಹೆಚ್ಚಿನ ಬ್ಯಾಂಕ್ಗಳು ವಿಫಲಗೊಳ್ಳಲಿವೆ ಎಂದು ನಾನು ಭಾವಿಸುತ್ತೇನೆ. ಬ್ಯಾಂಕ್ಗಳ ಈ ವೈಫಲ್ಯಕ್ಕೆ ಕೇಂದ್ರವೇ ಕಾರಣ' ಎಂದು ಆಪಾದಿಸಿದ್ದರು.