ರೇವಾ( ಮಧ್ಯಪ್ರದೇಶ):ಭಾರತವು ಇಂಧನ ಮಾಲಿನ್ಯ ಮುಕ್ತ (ಕ್ಲೀನ್ ಎನರ್ಜಿ) ಶಕ್ತಿಯ ಆಕರ್ಷಕ ಜಾಗತಿಕ ಮಾರುಕಟ್ಟೆ ಹೊಂದಿರುವ ರಾಷ್ಟ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಧ್ಯಪ್ರದೇಶದ ರೇವಾದಲ್ಲಿ 750 ಮೆಗಾವ್ಯಾಟ್ ಸೌರ ಯೋಜನೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದ ಅವರು, ಭಾರತವು ಸ್ವಚ್ಛ ಮತ್ತು ಅಗ್ಗದ ಶಕ್ತಿಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದರು.
ಸೌರ ಶಕ್ತಿಯು ಖಚಿತ, ಶುದ್ಧ ಮತ್ತು ಸುರಕ್ಷತೆಯ ಮೂಲಕ ಭಾರತವು ಈಗ ವಿಶ್ವದ ಅಗ್ರ ಐದು ಸೌರಶಕ್ತಿ ಉತ್ಪಾದಕರಲ್ಲಿ ಒಂದಾಗಿದೆ. ರೇವಾ ಸೌರ ವಿದ್ಯುತ್ ಸ್ಥಾವರವು ಮಧ್ಯಪ್ರದೇಶಕ್ಕೆ ವಿದ್ಯುತ್ ಪೂರೈಸುವುದು ಮಾತ್ರವಲ್ಲ, ದೆಹಲಿ ಮೆಟ್ರೋಗೆ ಸಹ ವಿತರಣೆ ಮಾಡಲಿದೆ ಎಂದು ಹೇಳಿದರು.
ಈ ರೇವಾ ಯೋಜನೆಯು ಮೂರು ಸೌರ ಉತ್ಪಾದನಾ ಘಟಕಗಳನ್ನು ಒಳಗೊಂಡಿದ್ದು, 500 ಹೆಕ್ಟೇರ್ ಪ್ರದೇಶದಲ್ಲಿ 250 ಮೆಗಾವ್ಯಾಟ್ ಸೌರ ಶಕ್ತಿ ಉತ್ಪಾದನೆ ಆಗಲಿದೆ (ಒಟ್ಟು ವಿಸ್ತೀರ್ಣ 1500 ಹೆಕ್ಟೇರ್).
ಸೌರ ಪಾರ್ಕ್ ಅನ್ನು ರೇವಾ ಅಲ್ಟ್ರಾ ಮೆಗಾ ಸೋಲಾರ್ ಲಿಮಿಟೆಡ್ (ಆರ್ಯುಎಂಎಸ್ಎಲ್) ಜಂಟಿಯಾಗಿ ಮಧ್ಯಪ್ರದೇಶದ ಉರ್ಜಾ ವಿಕಾಸ್ ನಿಗಮ್ ಲಿಮಿಟೆಡ್ (ಎಂಪಿವಿಎನ್) ಮತ್ತು ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್‌ಇಸಿಐ) ಕೈಗೆತ್ತಿಕೊಂಡಿವೆ.