ನವದೆಹಲಿ:ಭಯೋತ್ಪಾದನಾ ನಿಗ್ರಹ ವೇದಿಕೆಯಾದ ನ್ಯಾಟ್‌ಗ್ರಿಡ್ ಅಡಿಯಲ್ಲಿ ಆದಾಯ ತೆರಿಗೆ ಇಲಾಖೆಯು ಸಿಬಿಐ ಮತ್ತು ಎನ್‌ಐಎ ಸೇರಿದಂತೆ 10 ತನಿಖಾ ಮತ್ತು ಗುಪ್ತಚರ ಸಂಸ್ಥೆಗಳೊಂದಿಗೆ ಪ್ಯಾನ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಳ್ಳಲಿದೆ.
ಐಟಿ ಇಲಾಖೆಗೆ ನೀತಿ ರೂಪಿಸುವ ಕೇಂದ್ರೀಯ ನೇರ ತೆರಿಗೆ ಮಂಡಳಿ ಜುಲೈ 21ರ ಆದೇಶದಲ್ಲಿ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್), ತೆರಿಗೆ ಕಡಿತ ಮತ್ತು ಸಂಗ್ರಹ ಖಾತೆ ಸಂಖ್ಯೆ (ಟಿಎಎನ್), ಬ್ಯಾಂಕ್ ಖಾತೆ ವಿವರ, ಐಟಿ ರಿಟರ್ನ್ಸ್ ಮತ್ತು ಮೂಲದಲ್ಲಿ ತೆರಿಗೆ ಕಡಿತಗೊಳಿಸುವುದು (ಟಿಡಿಎಸ್) ಸೇರಿದಂತೆ ಪರಸ್ಪರ ಒಪ್ಪಿಗೆಯಡಿ ಯಾವುದೇ ಮಾಹಿತಿಯನ್ನು ರಾಷ್ಟ್ರದ ಅಗ್ರ 10 ಏಜೆನ್ಸಿಗಳ ಜತೆ ಹಂಚಿಕೊಳ್ಳಲಿದೆ ಎಂದು ಇತ್ತೀಚಿನ ಆದೇಶದಲ್ಲಿ ತಿಳಿಸಿದೆ.
ಕೇಂದ್ರೀಯ ಏಜೆನ್ಸಿಗಳಿಗೆ ಮಾಹಿತಿ ಒದಗಿಸುವಿಕೆಯನ್ನು ರಾಷ್ಟ್ರೀಯ ಗುಪ್ತಚರ ಗ್ರಿಡ್ (ನ್ಯಾಟ್‌ಗ್ರಿಡ್)ದೊಂದಿಗೆ ಹಂಚಿಕೊಳ್ಳಲಾಗುವುದು. ಇದು ಶಂಕಿತರನ್ನು ಪತ್ತೆಹಚ್ಚಲು ಮತ್ತು ಭಯೋತ್ಪಾದಕ ದಾಳಿಯನ್ನು ನಿಗ್ರಹಿಸಲು ನೆರವಾಗಲಿದೆ. ವಲಸೆಯಂತಹ ವರ್ಗೀಕೃತ ಮಾಹಿತಿಯ ಜೊತೆಗೆ ಬ್ಯಾಂಕಿಂಗ್, ವೈಯಕ್ತಿಕ ತೆರಿಗೆ, ವಿಮಾನ ಮತ್ತು ರೈಲು ಪ್ರಯಾಣ ಕೂಡ ಇದರಡಿ ಸೇರಿದೆ.
ಹಂಚಿಕೆಯಾಗಲಿರುವ 10 ಏಜೆನ್ಸಿಗಳು: ಕೇಂದ್ರ ತನಿಖಾ ದಳ, ಕಂದಾಯ ಗುಪ್ತಚರ ನಿರ್ದೇಶನಾಲಯ, ಜಾರಿ ನಿರ್ದೇಶನಾಲಯ, ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ, ಕ್ಯಾಬಿನೆಟ್ ಸೆಕ್ರೆಟರಿಯೇಟ್, ಇಂಟೆಲಿಜೆನ್ಸ್ ಬ್ಯೂರೋ, ಜಿಎಸ್ಟಿ ಗುಪ್ತಚರ ನಿರ್ದೇಶನಾಲಯ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ಹಣಕಾಸು ಗುಪ್ತಚರ ಘಟಕ ಮತ್ತು ರಾಷ್ಟ್ರೀಯ ತನಿಖೆ ಏಜೆನ್ಸಿ.