ಹೈದರಾಬಾದ್: ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ಆದಾಯ ತೆರಿಗೆ ಇಲಾಖೆ ಕಣ್ಗಾವಲು ಇಡಬಹುದಾದ ಹಣಕಾಸು ವ್ಯವಹಾರಗಳಲ್ಲಿ ಆಭರಣ ಖರೀದಿ, ವಿದ್ಯುತ್ ಬಳಕೆ, ಬ್ಯುಸಿನೆಸ್ ಕ್ಲಾಸ್/ ವಿದೇಶಿ ಪ್ರಯಾಣ ಅಥವಾ ಹೆಚ್ಚಿನ ಮೌಲ್ಯದ ಖರ್ಚು ದಾಖಲಿಸಲು ಹಣಕಾಸು ವ್ಯವಹಾರಗಳ ಘೋಷಣೆ (ಎಸ್‌ಎಫ್‌ಟಿ) ವ್ಯಾಪ್ತಿ ವಿಸ್ತರಿಸಲು ಹಣಕಾಸು ಸಚಿವಾಲಯ ಗುರುವಾರ ಪ್ರಸ್ತಾಪಿಸಿದೆ.
20,000 ರೂ.ಗಿಂತ ಹೆಚ್ಚಿನ ಹೋಟೆಲ್ ಬಿಲ್, 1 ಲಕ್ಷ ರೂ.ಗಿಂತ ಹೆಚ್ಚಿನ ಶಿಕ್ಷಣ ಶುಲ್ಕ ಮತ್ತು ಡೊನೇಷನ್, 1 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಆಭರಣ ಹಾಗೂ ಬಿಳಿ ಸರಕುಗಳ ಖರೀದಿಯು ಆದಾಯ ತೆರಿಗೆ ಇಲಾಖೆಯ ಪರಿಶೀಲನೆ ಅಡಿಯಲ್ಲಿ ಬರಬಹುದು ಎಂದು ಪ್ರಸ್ತಾಪಿಸಲಾಗಿದೆ.
ಆದಾಯ ತೆರಿಗೆ ಇಲಾಖೆ ತನ್ನ ವಹಿವಾಟು ವರದಿ ಚೌಕಟ್ಟಿನಡಿ ಹೆಚ್ಚಿನ ಹಣಕಾಸು ವಹಿವಾಟುಗಳನ್ನು ಸೇರಿಸಲು ಎದುರು ನೋಡುತ್ತಿದೆ. ಹಣಕಾಸು ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ನಿಗದಿತ ಮಿತಿಗಿಂತ ಹೆಚ್ಚಿನ ವಹಿವಾಟುಗಳನ್ನು ವರದಿ ಮಾಡಬೇಕಾಗಬಹುದು.