ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯು (ಜಿಎಸ್‌ಟಿ) ಸೆಪ್ಟೆಂಬರ್ ಮಾಸಿಕದಲ್ಲಿ 95,480 ಕೋಟಿ ರೂ. ಸಂಗ್ರಹವಾಗಿದ್ದು, ಈ ಹಣಕಾಸು ವರ್ಷದಲ್ಲಿ ಇದುವರೆಗಿನ ಗರಿಷ್ಠ ಮಟ್ಟ ತಲುಪಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಕಳೆದ ವರ್ಷ ಇದೇ ತಿಂಗಳಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹಕ್ಕಿಂತ ಈ ತಿಂಗಳ ಆದಾಯವು ಶೇ 4ರಷ್ಟು ಹೆಚ್ಚಳವಾಗಿದೆ. ಸೆಪ್ಟೆಂಬರ್‌ನಲ್ಲಿ ಸರಕುಗಳ ಆಮದಿನಿಂದ ಸಂಗ್ರಹಿಸಿದ ತೆರಿಗೆ 102 ಪ್ರತಿಶತದಷ್ಟು ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿ) ಆದಾಯವು ಕಳೆದ ವರ್ಷ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬರುವ ಆದಾಯದ ಶೇ 105ರಷ್ಟಿತ್ತು.
2020ರ ಸೆಪ್ಟೆಂಬರ್ ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 95,480 ಕೋಟಿ ರೂ.ಯಷ್ಟಾಗಿದೆ. ಇದರಲ್ಲಿ ಕೇಂದ್ರ ಜಿಎಸ್‌ಟಿ 17,741 ಕೋಟಿ ರೂ., ರಾಜ್ಯ ಜಿಎಸ್‌ಟಿ 23,131 ಕೋಟಿ ರೂ., ಇಂಟಿಗ್ರೇಟೆಡ್ ಜಿಎಸ್‌ಟಿ 47,484 ಕೋಟಿ ರೂ. (ಸರಕುಗಳ ಆಮದು ಸಂಗ್ರಹ 22,442 ಕೋಟಿ ರೂ.) ಮತ್ತು ಸೆಸ್ 7,124 ಕೋಟಿ ರೂ. (ಸರಕುಗಳ ಆಮದು ಸೇರಿ 788 ಕೋಟಿ ರೂ.) ಆಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.