ಮುಂಬೈ :ಭಾರತದ ಆರ್ಥಿಕತೆಯು ಸಹಜ ಸ್ಥಿತಿಗೆ ಮರಳುವ ಲಕ್ಷಣಗಳನ್ನು ತೋರುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ರಜನೀಶ್ ಕುಮಾರ್ ಅವರು ಕೂಡ ಭಾರತದ ಆರ್ಥಿಕತೆಯು ಚೇತರಿಕೆಯ ಹಸಿರು ಚಿಗುರು ಕಾಣಿಸಲು ಆರಂಭಿಸಿದೆ ಎಂದಿದ್ದರು. ಎಸ್‌ಬಿಐನ 7ನೇ ಬ್ಯಾಂಕಿಂಗ್ ಮತ್ತು ಅರ್ಥಶಾಸ್ತ್ರ ಕಾನ್ಕ್ಲೇವ್ನಲ್ಲಿ ಭಾಗವಹಿಸಿದ ಆರ್ಬಿಐ ಗವರ್ನರ್, 'ವ್ಯಾಪಾರ ಮತ್ತು ಆರ್ಥಿಕತೆಯ ಮೇಲೆ ಕೊರೊನಾದ ಪ್ರಭಾವ' ಕುರಿತು ಮಾತನಾಡಿದರು. ಈ ವೇಳೆ ಮೋದಿ, ರಜಿನೀಶ್ ದೃಷ್ಟಿ ಕೋನದಲ್ಲಿ ಪ್ರಸ್ತುತ ಆರ್ಥಿಕತೆಯನ್ನು ವ್ಯಾಖ್ಯಾನಿಸಿದ್ದಾರೆ.
ಅಸಾಧ್ಯವೆಂದು ನಂಬುವುದನ್ನು ಸಾಧಿಸುವ ಮನೋಭಾವ ಭಾರತೀಯರಿಗೆ ಇದೆ. ಆರ್ಥಿಕ ಚೇತರಿಕೆ ವಿಷಯಕ್ಕೆ ಬಂದಾಗ ಭಾರತದಲ್ಲಿ ನಾವು ಈಗಾಗಲೇ ಹಸಿರು ಚಿಗುರುಗಳನ್ನು ನೋಡುತ್ತಿದ್ದೇವೆ ಎಂಬುದರಲ್ಲಿ ಆಶ್ಚರ್ಯವಿಲ್ಲ ಎಂದು ಇಂಡಿಯಾ ಗ್ಲೋಬಲ್ ವೀಕ್ 2020 ಉದ್ದೇಶಿಸಿ ಮಾಡಿದ್ದ ಭಾಷಣದಲ್ಲಿ ಮೋದಿ ಹೇಳಿದ್ದರು.
ಕೊರೊನಾ ವೈರಸ್ ಹರಡುವಿಕೆಯಿಂದ ಅಸ್ತವ್ಯಸ್ತವಾಗಿರುವ ದೇಶದ ಆರ್ಥಿಕತೆಯು ಜೂನ್‌ನಿಂದ ಚೇತರಿಸಿಕೊಳ್ಳಲು ಪ್ರಾರಂಭಿಸಿದೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದರು. ಭಾರತದ ಹಣದುಬ್ಬರವು ಉತ್ತಮವಾಗಿ ನಿಯಂತ್ರಿಸಲ್ಪಟ್ಟಿದೆ ಮತ್ತು ಶೂನ್ಯಕ್ಕೆ ಹತ್ತಿರವಾಗಿದೆ ಎಂದು ಗುರುವಾರ ನಡೆದ 'ಇಂಡಿಯಾ ಗ್ಲೋಬಲ್ ವೀಕ್ 2020' ವರ್ಚುವಲ್ ಫೋರಂನಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಉಲ್ಲೇಖಿಸಿದ್ದರು.
ಕೋವಿಡ್-19 ಸಾಂಕ್ರಾಮಿಕ ರೋಗವು ಕಳೆದ 100 ವರ್ಷಗಳಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಉತ್ಪಾದನೆ, ಉದ್ಯೋಗ, ಪೂರೈಕೆ ಸರಪಳಿ ಸೇರಿ ಆರ್ಥಿಕ ಚಟುವಟಿಕೆಗಳನ್ನೇ ಋಣಾತ್ಮಕ ಹಾದಿಗೆ ನೂಕಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದರು.
ಕೊರೊನಾ ವೈರಸ್ ಅಸ್ತಿತ್ವದಲ್ಲಿರುವ ಜಾಗತಿಕ ಶ್ರೇಣಿ, ಜಾಗತಿಕ ಮೌಲ್ಯದ ಸರಪಳಿ, ಕಾರ್ಮಿಕ ಮತ್ತು ಬಂಡವಾಳ ಹರಿವು ಹಾಗೂ ಜಾಗತಿಕ ಜನಸಂಖ್ಯೆಯ ದೊಡ್ಡ ಭಾಗವಾದ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳ ಮೇಲೆ ಏನು ಉಂಟು ಮಾಡಿದೆ ಎಂಬುದನ್ನು ಹೇಳಬೇಕಾಗಿಲ್ಲ. ಕೋವಿಡ್-19 ಸಾಂಕ್ರಾಮಿಕವು ಬಹುಶಃ, ಇದುವರೆಗೆ ನಮ್ಮ ಆರ್ಥಿಕ ಮತ್ತು ಹಣಕಾಸು ವ್ಯವಸ್ಥೆಯ ದೃಢತೆ ಮತ್ತು ಸ್ಥಿತಿ ಸ್ಥಾಪಕತ್ವಕ್ಕೆ ದೊಡ್ಡ ಪರೀಕ್ಷೆಯನ್ನು ಒಡ್ಡುತ್ತಿದೆ ಎಂದರು.